ಉದಯವಾಹಿನಿ, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೋದರೆ ರೋಟಿ, ಚಪಾತಿ ಜೊತೆಗೆ ನಾನಾ ರೀತಿಯ ಪನ್ನೀರ್ ಕರಿಗಳನ್ನು ನೀವು ತಿಂದಿರಬಹುದು. ಈ ಪೈಕಿ ಮೇಥಿ ಪನ್ನೀರ್ ಕರಿ ಕೂಡ ಒಂದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು:
ಪನ್ನೀರ್ – 200 ಗ್ರಾಂ ಚಕ್ಕೆ – ಸ್ವಲ್ಪ , ಲವಂಗ – ಸ್ವಲ್ಪ, ಕಾಳು ಮೆಣಸು – ಕಾಲು ಚಮಚ, ಶುಂಠಿ ಹಾಗೂ ಬೆಳ್ಳುಳ್ಳಿ – ಸ್ವಲ್ಪ
ಹಸಿಮೆಣಸಿನ ಕಾಯಿ – 9ರಿಂದ 10, ಈರುಳ್ಳಿ – 1, ಗೋಡಂಬಿ – ಅರ್ಧ ಹಿಡಿಯಷ್ಟು, ಜೀರಿಗೆ – ಸ್ವಲ್ಪ, ಮೆಂತ್ಯೆ ಸೊಪ್ಪು – 1 ಕಪ್
ಬೇಯಿಸಿದ ಬಟಾಣಿ – ಒಂದು ಕಪ್ , ಗರಂ ಮಸಾಲಾ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ: ಮೊದಲಿಗೆ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಈಗ ಎಣ್ಣೆಗೆ ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಈರುಳ್ಳಿ, ಗೋಡಂಬಿ ಹಾಕಿ ಕೆಂಪಗೆ ಹುರಿಯಿರಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಮೆಂತ್ಯೆ ಸೊಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
* ನಂತರ ಬೇಯಿಸಿದ ಬಟಾಣಿ ಹಾಗೂ ರುಬ್ಬಿಕೊಂಡ ಮಸಾಲೆ ಹಾಗೂ ಹೆಚ್ಚಿದ ಪನ್ನೀರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ, ಬಳಿಕ ಉಪ್ಪು, ಗರಂಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ. 5-10 ನಿಮಿಷ ಕುದಿಯಲು ಬಿಡಿ. ಬಳಿಕ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಮೇಥಿ ಪನ್ನೀರ್ ಕರಿ ಸವಿಯಲು ಸಿದ್ಧ.

 

Leave a Reply

Your email address will not be published. Required fields are marked *

error: Content is protected !!