ಉದಯವಾಹಿನಿ, ಬೈರುತ್, ಲೆಬನಾನ್​ : ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ಉನ್ನತ ಮಿಲಿಟರಿ ಮುಖ್ಯಸ್ಥರು ಹತ್ಯೆಯಾಗಿದ್ದು, ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವ ಹಕ್ಕು ಹಿಜ್ಬುಲ್ಲಾ ಗುಂಪಿಗೆ ಇದೆ ಎಂದು ಹಿಜ್ಬುಲ್ಲಾ ನಾಯಕ ನಯೀಮ್ ಖಾಸೆಮ್ ಶುಕ್ರವಾರ ಹೇಳಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಹೈತಮ್ ಅಲಿ ತಬ್ತಬಾಯಿ ಹತ್ಯೆಯು “ಒಂದು ಸ್ಪಷ್ಟ ಆಕ್ರಮಣ ಮತ್ತು ಘೋರ ಅಪರಾಧ”. ಈ ಬಗ್ಗೆ ನಮ್ಮ ಗುಂಪಿಗೆ ಪ್ರತಿಕ್ರಿಯಿಸುವ ಹಕ್ಕಿದೆ, ನಾವು ಅದಕ್ಕೆ ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದಿದ್ದಾರೆ.ಇಸ್ರೇಲ್ ಜೊತೆಗಿನ ಒಂದು ವರ್ಷಕ್ಕೂ ಹೆಚ್ಚು ಕಾಲದ ದ್ವೇಷವನ್ನು ಕೊನೆಗೊಳಿಸಲು ಪ್ರಯತ್ನಿಸಿದ ನವೆಂಬರ್ 2024ರ ಕದನ ವಿರಾಮವನ್ನು ಇರಾನ್ ಬೆಂಬಲಿತ ಗುಂಪು ಗೌರವಿಸಿದೆ ಎಂದಿರುವ ಅವರು, ದೇಶದ ಮೇಲೆ ನಿರಂತರ ಇಸ್ರೇಲಿ ದಾಳಿಗಳನ್ನು ಕೊನೆಗೊಳಿಸಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.ಕದನ ವಿರಾಮದ ನಂತರವೂ ಯುದ್ಧ ನಡೆಯಲಿದೆ ಎಂದು ನೀವು ನಿರೀಕ್ಷಿಸುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಯೀಮ್ ಖಾಸೆಮ್, ಲೆಬನಾನ್​ನಲ್ಲಿನ ಹೆಚ್ಚಿರುವ ಯುದ್ದದ ಭೀತಿಯನ್ನು ಪ್ರಸ್ತಾಪಿಸುತ್ತಾ, ಹೌದು, ಒಂದು ಹಂತದಲ್ಲಿ ಆ ಸಾಧ್ಯತೆ ಇದೆ ಎಂದರು. ಅದಾಗ್ಯೂ, ಇಸ್ರೇಲ್ ಯುದ್ದದ ಕುರಿತು ತನ್ನ ಆಯ್ಕೆಗಳ ಬಗ್ಗೆ ಯೋಚಿಸುತ್ತಿದೆ. ಇನ್ನೊಂದೆಡೆ ಅಮೆರಿಕವೂ ಅದರದ್ದೇ ಆದ ರೀತಿಯಲ್ಲಿ ಯೋಚಿಸುತ್ತಿದೆ ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ತಬ್ತಾಬಾಯಿ ಅವರು ದಾಳಿಗೊಳಗಾದಾಗ ಭವಿಷ್ಯದ ಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲು ತಮ್ಮ ನಾಲ್ವರು ಸಹಾಯಕರೊಂದಿಗೆ ಸಭೆಯಲ್ಲಿದ್ದರು. ಹೈತಮ್ ಅಲಿ ತಬ್ತಬಾಯಿ ಅವರು ಯುದ್ಧವಿರಾಮದ ನಂತರ ಇಸ್ರೇಲ್‌ನಿಂದ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಹಿಜ್ಬುಲ್ಲಾ ಕಮಾಂಡರ್​​. ಇಸ್ರೇಲ್ ತನ್ನ ದಾಳಿಗಳನ್ನು ಮುಂದುವರೆಸಿದೆ ಮತ್ತು ಗುಂಪಿನ ಹಲವಾರು ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ನಯೀಮ್​ ಹೇಳಿದ್ದಾರೆ.ಏನಿದು ಘಟನೆ ?: ಕದನ ವಿರಾಮ ಘೋಷಣೆಯ ಹಲವು ತಿಂಗಳ ಬಳಿಕ ಲೆಬನಾನ್ ರಾಜಧಾನಿಯ ಮೇಲೆ ಇಸ್ರೇಲ್​ ಇದೇ ತಿಂಗಳ 24 ರಂದು ವಾಯುದಾಳಿ ನಡೆಸಿತ್ತು. ಇದರಿಂದಾಗಿ ಹಿಜ್ಬುಲ್ಲಾ ಮುಖ್ಯಸ್ಥ ಹೈಥಮ್ ತಬ್ತಬಾಯಿ ಅವರು ಮೃತಪಟ್ಟಿದ್ದರು. ಕಳೆದ ಜೂನ್​ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್​ ದಾಳಿ ಮಾಡಿತ್ತು. ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ನಡೆದ ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿತ್ತು.

Leave a Reply

Your email address will not be published. Required fields are marked *

error: Content is protected !!