ಉದಯವಾಹಿನಿ, ಗಾಯಕನಾಗಿ ಕನ್ನಡಿಗರ ಮನ ಗೆದ್ದಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ʻಲೋ ನವೀನʼ ಇತ್ತೀಚೆಗೆ ಈ ಚಿತ್ರದ ಕೋಣಾಣೆ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮಾಜಿ ಶಾಸಕರಾದ ಎ.ಮಂಜು, ಪುಟ್ಟರಾಜು, ಅಮರನಾಥ ಗೌಡ, ವಿಶ್ವಾಮಿತ್ರ, ಜಿ.ಟಿ.ಮಾಲ್ ನ ಆನಂದ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಹಾಡು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಅಪ್ಪಟ ಜನಪದ ಶೈಲಿಯ ಈ ಹಾಡನ್ನು ಮೈಸೂರಿನ ಹೆಚ್.ಡಿ ಕೋಟೆಯ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿದ್ದಾರೆ. ನವೀನ್ ಸಜ್ಜು ಸಹ ಗಾಯನಕ್ಕೆ ಜೊತೆಯಾಗಿದ್ದಾರೆ. ಅನಿವಾಸಿ ಭಾರತೀಯರಾದ ಬೆನ್ ಚಿಕ್ಕಸ್ವಾಮಿ ಅರ್ಪಿಸುವ , ಕೀರ್ತಿಸ್ವಾಮಿ ನಿರ್ಮಿಸಿರುವ ಹಾಗೂ ಧನುರ್ಧಾರಿ ಪವನ್ ನಿರ್ದೇಶನದ “ಲೋ ನವೀನ” ಚಿತ್ರದ ಮೊದಲ ಹಾಡು ಇದ್ದಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ. ಹಾಡು ಬಿಡುಗಡೆ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೂಲತಃ ಮಳವಳ್ಳಿಯವನಾದ ನಾನು, ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ನನ್ನ ಪ್ರತಿಭೆ ಗುರುತಿಸಿದ್ದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ನಿರ್ದೇಶಕ ಪವನ್ ಕುಮಾರ್ “ಲೂಸಿಯಾ” ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ನನ್ನ ಜರ್ನಿ ಆರಂಭವಾಯಿತು. ಆನಂತರ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದೇನೆ. ನಾನು, ಸುನೀಲ್ ಮೈಸೂರು ಹಾಗೂ ಅನೇಕ ಸ್ನೇಹಿತರು ಸೇರಿ ಮನೋರಂಜನೆಯೇ ಪ್ರಧಾನವಾಗಿರುವ ಈ ಚಿತ್ರದ ಕಥೆ ಬರೆದಿದ್ದೇವೆ. ಅಮೇರಿಕಾಗೆ ಒಮ್ಮೆ ಹೋಗಿದ್ದಾಗ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಅವರನ್ನು ಭೇಟಿ ಮಾಡಿದೆ. ಅವರ ಬಳಿ ಈ ಚಿತ್ರದ ಬಗ್ಗೆ ಹೇಳಿದಾಗ ಅವರು ನಾವೇ ಚಿತ್ರಕ್ಕೆ ಬಂಡವಾಳ ಹೂಡುತ್ತೇವೆ ಎಂದರು. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ನಾನೇ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಈ ಚಿತ್ರದಲ್ಲಿದ್ದು, ಮೊದಲ ಹಾಡಾಗಿ “ಕೋಣಾಣೆ” ಬಿಡುಗಡೆಯಾಗಿದೆ.
