
ಉದಯವಾಹಿನಿ, ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಘಾತ ಅನುಭವಿಸಿರುವ ಭಾರತ ತಂಡ ಮುಂಬರುವ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಸರಣಿಯ ಎರಡೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಪ್ರವಾಸಿ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ. ಈ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆ ನೋವಿಗೆ ತುತ್ತಾಗಿ ತಂಡದಿಂದ ಹೊರಬಿದ್ದಿರುವ ನಾಯಕ ಶುಭಮನ್ ಗಿಲ್ ) ಅವರ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿನ್ನೆಲೆ ಗಿಲ್ ಬದಲು ರೋಹಿತ್ ಶರ್ಮಾ ಜೊತೆ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಗೊಂದಲ ಶುರುವಾಗಿದೆ. ಈ ಮಧ್ಯೆ, ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಇವರಿಬ್ಬರಲ್ಲಿ ಒಬ್ಬರು ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಋತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ʻಎʼ ತಂಡದ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಸತತ 16 ತಿಂಗಳ ಬಳಿಕ ತಂಡಕ್ಕೆ ಮರಳಿರುವ ಗಾಯಕ್ವಾಡ್ ಸರಣಿಯ ಮೂರು ಇನಿಂಗ್ಸ್‌ಗಳಲ್ಲಿ 201 ರನ್ ಕಲೆಹಾಕಿ ಭರ್ಜರಿ ಲಯಕ್ಕೆ ಮರಳಿದ್ದರು. ಇದಕ್ಕೂ ಮೊದಲು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅವರು, ಎಂಟು ಇನಿಂಗ್ಸ್‌ಗಳಲ್ಲಿ 85.66ರ ಸರಾಸರಿಯಲ್ಲಿ ಒಟ್ಟು 514 ರನ್ ಗಳಿಸಿದ್ದರು. ಗಾಯಕ್ವಾಡ್ ಕೊನೆಯ ಬಾರಿಗೆ 2024ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು.
