ಉದಯವಾಹಿನಿ, ಜೈಪುರ: ಭಾರಿ ಪ್ರಮಾಣದಲ್ಲಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ವೊಂದನ್ನು ವಶಕ್ಕೆ ಪಡೆದಿರುವ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರಾಜಸ್ಥಾನದ ರಾಜ್‌ಸಮಂದ್‌ನಲ್ಲಿ ಅಪಾರ ಪ್ರಮಾಣ ಸ್ಪೋಟಕಗಳನ್ನು ತುಂಬಿಕೊಂಡು ಪಿಕಪ್ ವಾಹನವೊಂದು ಸಾಗುತ್ತಿತ್ತು. ಇದರ ಮಾಹಿತಿ ತಿಳಿದ ಪೊಲೀಸರು ಟ್ರಕ್ ಅನ್ನು ವಶಕ್ಕೆಪಡೆದಿದೆ. ಸುಮಾರು 10 ಕಿ.ಮೀ. ವ್ಯಾಪ್ತಿಗೆ ಹಾನಿ ಉಂಟು ಮಾಡಬಹುದಾದ ಸಾಮರ್ಥ್ಯವಿರುವ 100ಕ್ಕೂ ಹೆಚ್ಚು ಪೆಟ್ಟಿಗೆಗಳ ಜೆಲಾಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು ಇದ್ದವು. ಗಣಿಗಾರಿಕಾ ಚಟುವಟಿಕೆಗಳಿಗಾಗಿ ಇದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜಸ್ಥಾನದ ರಾಜ್‌ಸಮಂದ್‌ನ ತ್ರಿನೇತ್ರ ವೃತ್ತದಲ್ಲಿ ಟ್ರಕ್ ವೊಂದನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಟ್ರಕ್ ನಲ್ಲಿದ್ದ ಸುಮಾರು 109 ಪೆಟ್ಟಿಗೆಗಳಲ್ಲಿ ಒಟ್ಟು 981 ಜೆಲಾಟಿನ್ ಸ್ಟಿಕ್‌ಗಳು, 93 ಡಿಟೋನೇಟರ್‌ಗಳು ಮತ್ತು ಸುರಕ್ಷತಾ ಫ್ಯೂಸ್ ಅನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ.
ಟ್ರಕ್ ನಲ್ಲಿದ್ದ ರಾಜಸ್ಥಾನದ ಭಗವತ್ ಸಿಂಗ್, ಹಿಮ್ಮತ್ ಸಿಂಗ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಕ್ ನಲ್ಲಿ ಸ್ಫೋಟಕಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳನ್ನು ಒದಗಿಸಲು ವಿಫಲರಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನಾಥದ್ವಾರದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಪ್ರಾ ರಾಜಾವತ್, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಗ್ಬಂಧನ ಹಾಕಿ ಟ್ರಕ್ ಅನ್ನು ವಶಕ್ಕೆ ಪಡೆದರು. ಒಟ್ಟು 981 ಶೆಲ್‌ಗಳು, 93 ಡಿಟೋನೇಟರ್‌ಗಳು ಮತ್ತು 30 ಅಡಿ ಸುರಕ್ಷತಾ ಫ್ಯೂಸ್ ಅನ್ನು ಒಳಗೊಂಡಿರುವ 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದರು.
