ಉದಯವಾಹಿನಿ, ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ Reddy) ಬಹು ಹಿಂದೂ ದೇವತೆಗಳ ಅಸ್ತಿತ್ವವನ್ನು ಅಪಹಾಸ್ಯ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ಹಿಂದೂ ಸಂಪ್ರದಾಯದಲ್ಲಿ ಬಹು ದೇವರುಗಳಿರುವುದನ್ನು ಪ್ರಶ್ನಿಸಿದ್ದಾರೆ. ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? ಮೂರು ಕೋಟಿ ಇದೆಯೇ? ಇಷ್ಟೊಂದು ಏಕೆ ಇವೆ? ಅವಿವಾಹಿತರಿಗೆ ಒಬ್ಬ ದೇವರು – ಹನುಮಾನ್. ಎರಡು ಬಾರಿ ಮದುವೆಯಾಗುವವರಿಗೆ ಇನ್ನೊಂದು ದೇವರು. ಮತ್ತು ಮದ್ಯಪಾನ ಮಾಡುವವರಿಗೆ ಇನ್ನೊಂದು ದೇವರು. ಕೋಳಿ ಬಲಿಗೆ ಒಬ್ಬನಿದ್ದಾನೆ; ಬೇಳೆ ಮತ್ತು ಅನ್ನಕ್ಕೆ ಒಬ್ಬನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇದ್ದಾನೆ ಎಂದು ಹೇಳುವ ಮೂಲಕ ವಿವಾದ ಎಬ್ಬಿಸಿದ್ದಾರೆ.
ಸದ್ಯ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ಕಿಡಿ ಕಾರಿವೆ. ಬಿಜೆಪಿ ಮತ್ತು ಬಿಆರ್‌ಎಸ್ ಮುಖ್ಯಮಂತ್ರಿ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ಯಾವುದೇ ನಾಚಿಕೆ ಇಲ್ಲ. ಎಲ್ಲಾ ಸಭೆಗಳಲ್ಲಿ, ಮುಸ್ಲಿಮರಿಂದಾಗಿ ಕಾಂಗ್ರೆಸ್ ಬಂದಿದೆ ಎಂದು ಅವರು ಹೇಳುತ್ತಾರೆ. ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ನಾಯಕ ಚಿಕ್ಕೋಟಿ ಪ್ರವೀಣ್ ಹೇಳಿದರು.
ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ ಬಿಆರ್‌ಎಸ್ ನಾಯಕ ರಾಕೇಶ್ ರೆಡ್ಡಿ ಅನುಗುಲ, ಇತ್ತೀಚಿನ ದಿನಗಳಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವುದು ಎಲ್ಲರಿಗೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಿದರು. ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ರೇವಂತ್ ರೆಡ್ಡಿ ಮಾತನಾಡುತ್ತಿರುವುದು ದುರದೃಷ್ಟಕರ. ಅವರು ತಕ್ಷಣ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
