ಉದಯವಾಹಿನಿ, ನ್ಯೂಯಾರ್ಕ್: ಅಮೆರಿಕದ ಆಲ್ಬನಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ತೆಲಂಗಾಣದ ಜನಗಾಂವ್ ಜಿಲ್ಲೆಯ ಸಹಜಾ ರೆಡ್ಡಿ (24) ಎಂದು ಗುರುತಿಸಲಾಗಿದೆ. ಮೊದಲಿಗೆ ಬೆಂಕಿ ಪಕ್ಕದ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದು, ಸಹಜಾಳ ಮನೆಗೆ ವ್ಯಾಪಿಸಿತ್ತು. ಬೆಂಕಿ ಹೊತ್ತಿಕೊಂಡಾಗ ಆಕೆ ನಿದ್ರೆಯಲ್ಲಿದ್ದಿದ್ದರಿಂದ ಬಚಾವ್ ಆಗಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿರುವ ಭಾರತದ ಕಾನ್ಸುಲೇಟ್ ಜನರಲ್, “ಆಲ್ಬನಿಯಲ್ಲಿ ನಡೆದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಮೂಲದ ಸಹಜ ರೆಡ್ಡಿ ಉದುಮಲ ಅವರ ಅಕಾಲಿಕ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂತ್ರಸ್ತೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಕಾನ್ಸುಲೇಟ್ ತಿಳಿಸಿದೆ. ಸಹಜಾ ಅವರ ಮರಣದಿಂದ ಕುಟುಂಬ ಹಾಗೂ ಗ್ರಾಮ ದುಃಖದಲ್ಲಿ ಮುಳುಗಿದೆ. ಅವರು ಹೈದರಾಬಾದ್‌ನಲ್ಲಿ ಟಿಸಿಎಸ್‌ನಲ್ಲಿ ಉದ್ಯೋಗಿಯಾಗಿರುವ ಉದುಮುಲ ಜಯಕರ್ ರೆಡ್ಡಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಗೋಪುಮರಿಯಾ ಶೈಲಜಾ ಅವರ ಹಿರಿಯ ಮಗಳಾಗಿದ್ದರು. ಸಹಜಾ 2021 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ವಾಸವಾಗಿದ್ದರು. ಪೋಷಕರು ವಿದೇಶದಿಂದ ತಮ್ಮ ಮಗಳ ಮೃತದೇಹವನ್ನು ಸ್ವದೇಶಕ್ಕೆ ತರಲು ಸರ್ಕಾರದ ಸಹಾಯ ಕೋರಿದ್ದಾರೆ.
