ಉದಯವಾಹಿನಿ, ಕೊಲೊಂಬೊ : ಈಗಾಗಲೇ ಭಾರಿ ಮಳೆ ಪ್ರವಾಹ ಮತ್ತು ಭೂ ಕುಸಿತಕ್ಕೆ ನಲುಗಿರುವ ಶ್ರೀಲಂಕಾದಲ್ಲಿ ಶುಕ್ರವಾರ ಮತ್ತೆ ಬಾರಿ ಮಳೆಯಾಗಿದ್ದು, ಭೂಕುಸಿತ ಉಂಟಾಗಿದೆ. ದಿತ್ವಾ ಚಂಡಮಾರುತದ ಪ್ರಕೃತಿ ವಿಕೋಪಕ್ಕೆ ನಲುಗಿರುವ ದೇಶದಲ್ಲಿ ಸಾವಿನ ಸಂಖ್ಯೆ 607ಕ್ಕೆ ತಲುಪಿದೆ. ರಾಷ್ಟ್ರೀಯ ನಿರ್ಮಾಣ ಸಂಶೋಧನಾ ಸಂಘಟನೆ (ಎನ್ಬಿಆರ್ಒ) ಬೆಟ್ಟಗಳ ಇಳಿಜಾರುಗಳ ಸ್ಥಿರತೆಯನ್ನು ಮೇಲ್ವಿಚಾರಣೆ ನಡೆಸುತ್ತಿದ್ದು, ಭಾರಿ ಮಳೆಯಿಂದಾಗಿ ಬೆಟ್ಟಗಳು ಮತ್ತಷ್ಟು ನೀರಿನಿಂದ ಆವೃತ್ತವಾಗಿ ಅಸ್ಥಿರಗೊಳ್ಳಬಹುದು ಎಂದಿದೆ.
ಕಳೆದ 24 ಗಂಟೆಗಳಿಂದ ಸುಮಾರು 150ಮಿಲಿ ಮೀಟರ್ಗಿಂತ ಹೆಚ್ಚಿನ ಮಳೆಯಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ, ಭೂ ಕುಸಿತದ ಅಪಾಯವಿದ್ದು, ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲಾಗುವುದು ಎಂದು ಎನ್ಬಿಆರ್ಒ ತಿಳಿಸಿದೆ. ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ ವಾರದಿಂದ ಪ್ರವಾಹದಲ್ಲಿ ಕಡಿಮೆಯಾಗುತ್ತಿದೆ.
ಈ ಪ್ರಕೃತಿ ವಿಕೋಪದಿಂದ 607 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಈ ಹಿಂದೆ ಲೆಕ್ಕಕ್ಕೆ ಸಿಗದ ಅನೇಕರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾಣೆಯಾದವರ ಸಂಖ್ಯೆಯನ್ನು 341 ರಿಂದ 214 ಕ್ಕೆ ಇಳಿಸಲಾಗಿದೆ. ಆದರೆ ಸಂತ್ರಸ್ತರ ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಿದೆ.
ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ನೀರು ಕಡಿಮೆಯಾದ ಕಾರಣ, ಸರ್ಕಾರಿ ಸ್ವಾಮ್ಯದ ನಿರಾಶ್ರಿತರ ಶಿಬಿರಗಳಲ್ಲಿದ್ದ ಜನರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಈ ಸಂಖ್ಯೆ 2,25,000 ರಿಂದ 150,000ಕ್ಕೆ ಇಳಿದಿದೆ. ದಾಖಲೆಯ ಮಳೆಯಿಂದಾಗಿ ಪ್ರವಾಹ ಮತ್ತು ಮಾರಕ ಭೂಕುಸಿತಗಳು ಸಂಭವಿಸಿವೆ. ಈ ಪ್ರಕೃತಿ ವಿಕೋಪವು ಇತಿಹಾಸದಲ್ಲೇ ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪ ಎಂದು ಅಲ್ಲಿನ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತಿಳಿಸಿದ್ದಾರೆ.
