ಉದಯವಾಹಿನಿ, ಪ್ರಿಟೋರಿಯಾ: ದಕ್ಷಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾದಲ್ಲಿ ಶನಿವಾರ ಹಾಸ್ಟೆಲ್‌ವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ 11 ಜನರಲ್ಲಿ 3 ವರ್ಷದ ಬಾಲಕ, 12 ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ ಕೂಡ ಸೇರಿದ್ದಾರೆ. 14 ಜನರು ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾವನ್ನೇ ಬೆಚ್ಚಿಬೀಳಿಸಿದ ಈ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಟ್ಟು 25 ಜನರ ಮೇಲೆ ಗುಂಡು ಹಾರಿಸಲಾಗಿದೆ” ಎಂದು ಪೊಲೀಸ್ ವಕ್ತಾರೆ ಅಥ್ಲೆಂಡಾ ಮಾಥೆ ಅವರು ಹೇಳಿದ್ದಾರೆ. ಪ್ರಿಟೋರಿಯಾದಿಂದ ಪಶ್ಚಿಮಕ್ಕೆ 18 ಕಿಲೋಮೀಟರ್(11 ಮೈಲುಗಳು) ದೂರದಲ್ಲಿರುವ ಸೌಲ್ಸ್‌ವಿಲ್ಲೆ ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಹಾಸ್ಟೇಲ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಅವರು ತಿಳಿಸಿದ್ದಾರೆ.ಬೆಳಗ್ಗೆ 4:30 ರ ಸುಮಾರಿಗೆ(0230 GMT) ಹಾಸ್ಟೆಲ್‌ನೊಳಗೆ ನುಗ್ಗಿದ ಮೂವರು ಬಂದೂಕುಧಾರಿಗಳು ಮದ್ಯಪಾನ ಮಾಡುತ್ತಿದ್ದ ಪುರುಷರ ಗುಂಪಿನ ಮೇಲೆ ಗುಂಡು ಹಾರಿಸಿದರು ಎಂದು ಅವರು ಹೇಳಿದ್ದಾರೆ.

“ಇದು ತುಂಬಾ ದುರದೃಷ್ಟಕರ ಘಟನೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಸಂಜೆ 6 ಗಂಟೆ ಸುಮಾರಿಗೆ ಮಾಹಿತಿ ನೀಡಲಾಗಿತ್ತು. ದಾಳಿ ಕಾರಣ ಇನ್ನೂ ತಿಳಿದು ಬಂದಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!