ಉದಯವಾಹಿನಿ, ಕೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನೂತನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರಷ್ಯಾ ಸ್ವಾಗತಿಸಿದೆ. ರಷ್ಯಾ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ‘ಅಮೆರಿಕದ ಪರಿಷ್ಕೃತ ಕಾರ್ಯತಂತ್ರ ದಾಖಲೆಯು ರಷ್ಯಾದ ವಿಶಾಲ ದೃಷ್ಟಿಕೋನಕ್ಕೆ ತಕ್ಕಂತೆಯೇ ಇದೆ’ ಎಂದು ನೀಡಿರುವ ಹೇಳಿಕೆ ಆಧರಿಸಿ ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಮುಖಾಮುಖಿ, ಮಾತುಕತೆ ಹಾಗೂ ಉತ್ತಮ ಸಂಬಂಧ ಸ್ಥಾಪಿಸುವುದರ ಪರವಾದ ಪ್ರಯತ್ನಗಳ ವಿರುದ್ಧದ ಕೆಲ ಹೇಳಿಕೆಗಳೂ ಅಲ್ಲಿವೆ. ಉಕ್ರೇನ್ ವಿಚಾರವನ್ನು ಇತ್ಯರ್ಥಮಾಡಿಕೊಳ್ಳುವಲ್ಲಿ ಅಮೆರಿಕದ ಜೊತೆ ಮತ್ತಷ್ಟು ರಚನಾತ್ಮಕ ಸಹಕಾರ ಹೊಂದಲು ಇದು ದಾರಿ ಮಾಡಬಹುದು ಎಂದು ರಷ್ಯಾ ಭಾವಿಸುತ್ತದೆ’ ಎಂದಿದ್ದಾರೆ.
ಶ್ವೇತಭವನ ಶುಕ್ರವಾರ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ದಾಖಲೆಯಲ್ಲಿ ‘ಜಾಗತಿಕ ಬಹಿಷ್ಕೃತ’ ಎಂದು ಕರೆಸಿಕೊಂಡಿದ್ದ ರಷ್ಯಾದೊಂದಿಗೆ ಬಹಳ ವರ್ಷಗಳ ನಂತರ ಸಂಬಂಧ ಸುಧಾರಣೆಗೆ ಅಮೆರಿಕ ಬಯಸುತ್ತದೆ. ಯುದ್ಧವನ್ನು ಕೊನೆಗಾಣಿಸುವ ಅಮೆರಿಕದ ಪ್ರಮುಖ ಆಸಕ್ತಿಯು ರಷ್ಯಾದೊಂದಿಗೆ ಕಾರ್ಯತಂತ್ರಾತ್ಮಕ ಸ್ಥಿರತೆಯನ್ನು ಮರುಸ್ಥಾಪಿಸುವುದು ಕೂಡ ಆಗಿದೆ’ ಎಂದು ಹೇಳಿಕೊಂಡಿದೆ.

ರಷ್ಯಾ ದಾಳಿಗೆ 4 ಸಾವು: ಯುದ್ಧಕ್ಕೆ ಅಂತ್ಯ ಹಾಡಲು ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ಮೂರನೇ ದಿನ ಮಾತುಕತೆ ನಡೆಸಿದ್ದರು. ಅದೇ ದಿನ ಉಕ್ರೇನ್‌ನ ಮೇಲೆ ರಷ್ಯಾ ಡೋನ್ ಮತ್ತು ಶೆಲ್‌ಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಸಂದರ್ಭದಲ್ಲೇ ರಷ್ಯಾ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.
ಶನಿವಾರ ರಾತ್ರಿ ಚೆರ್ನಿಹಿವ್‌ನ ಉತ್ತರ ಭಾಗದಲ್ಲಿ ಡೋನ್ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಕೈಗಾರಿಕಾ ನಗರ ಕ್ರೆಮಿನ್‌ಚುಕ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರಿಂದ ಉಕ್ರೇನ್‌ನ ಬೃಹತ್ ತೈಲಾಗಾರಕ್ಕೆ ಹಾನಿಯಾಗಿತ್ತು.
ಖಾರ್ಕಿವ್ ಪ್ರಾಂತ್ಯದ ಮೇಲೆ ರಷ್ಯಾ ಸೇನಾ ಪಡೆಗಳು ಭಾನುವಾರ ಶೆಲ್ ದಾಳಿ ನಡೆಸಿದ್ದು ಮೂವರು ಮೃತಪಟ್ಟು, ಇತರೆ 10 ಮಂದಿ ಗಾಯಗೊಂಡಿದ್ದರು. ಕದನ ವಿರಾಮ ಯೋಜನೆಯ ಕುರಿತು ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳ ಮಾತುಕತೆ ಬಗ್ಗೆ ದೂರವಾಣಿಯಲ್ಲಿ ಅಮೆರಿಕದ ಹಿರಿಯ ಅಧಿಕಾರಿಗಳ ಜೊತೆ ಶನಿವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಮಾಹಿತಿ ನೀಡಿದ ಮಾರನೇ ದಿನವೇ ರಷ್ಯಾ ದಾಳಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!