ಉದಯವಾಹಿನಿ, ವಾಷಿಂಗ್ಟನ್ : ಇತ್ತೀಚೆಗೆ ಶ್ವಾನ ಸಾಕುವುದನ್ನು ಬಹುತೇಕರು ಇಷ್ಟಪಡುತ್ತಾರೆ. ತಮ್ಮ ಪ್ರೀತಿಯ ನಾಯಿಯನ್ನು ಮನೆ ಮಕ್ಕಳಂತೆ ಸಾಕುತ್ತಾರೆ. ಶಾಂಪಿಗ್, ವಾಕಿಂಗ್, ಪ್ರವಾಸಕ್ಕೆಂದು ಹೋದಾಗ ನಾಯಿಯನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಅವು ತಪ್ಪಿಸಿಕೊಂಡು ಹೋಗುವುದೂ ಇದೆ. 2021ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದುಹೋದ ನಾಯಿ 2025ರಲ್ಲಿ ಇದ್ದಕ್ಕಿದ್ದಂತೆ ಪತ್ತೆಯಾದ ಘಟನೆ ಡೆಟ್ರಾಯಿಟ್‌ನಲ್ಲಿ ನಡೆದಿದೆ. ಚೋಕೊ ಎಂಬ ಹೆಸರಿನ ನಾಯಿಯು ಬರೋಬ್ಬರಿ 5 ವರ್ಷದ ಬಳಿಕ ಪವಾಡ ಸದೃಶ್ಯ ಎಂಬಂತೆ ಪತ್ತೆಯಾಗಿದೆ. ನಾಯಿಗಾಗಿ ನಾನಾ ಕಡೆ ಹುಡುಕಾಟ ನಡೆಸಿದರೂ ಅದು ಪತ್ತೆಯಾಗದಿದ್ದಾಗ ಮೈಕ್ರೋಚಿಪ್ ಸಹಾಯದಿಂದ ಅದನ್ನು ಪತ್ತೆ ಹಚ್ಚಲಾಗಿದೆ. ವಿಮಾನ ನಿಲ್ದಾಣದಲ್ಲಿ ಚೋಕೋ ತನ್ನ ಮಾಲಕಿಯ ಕೈ ಸೇರಿದ್ದು ಈ ಕುರಿತಾದ ವಿಡಿಯೊ ವೈರಲ್ ಆಗಿದೆ.
ಪೆಟ್ರೀಷಿಯಾ 2016ರಲ್ಲಿ ಚೋಕೊ ಎಂಬ ಹೆಸರಿನ ಕಂದು ಬಣ್ಣದ ಗಂಡು ನಾಯಿಯನ್ನು ಕ್ಯಾಲಿಫೋರ್ನಿಯಾದ ಆಂಟೆಲೋಪ್‌ನಿಂದ ದತ್ತು ಪಡೆದಿದ್ದರು. ಅದನ್ನು ಅವರ ಕುಟುಂಬದಲ್ಲಿ ಬಹಳ ಪ್ರೀತಿಯಿಂದ ಮಗುವಿನಂತೆ ಸಾಕಲಾಗುತ್ತಿತ್ತು.
2021ರ ಮೇಯಲ್ಲಿ ಚೋಕೊ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಪೆಟ್ರೀಷಿಯಾ ಅದಕ್ಕಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲೇ ಇಲ್ಲ.ಚೋಕೊದ ಬೆಲ್ಟ್‌ನಲ್ಲಿ ಮೈಕ್ರೋಚಿಪ್ ಅಳವಡಿಸಿದ್ದ ಕಾರಣ ಎಂದಾದರು ಒಂದು ದಿನ ಅದು ತನ್ನ ಕೈ ಸೇರುತ್ತದೆ ಎಂಬ ಭರವಸೆ ಪೆಟ್ರೀಷಿಯಾ ಅವರಲ್ಲಿತ್ತು. ಸುಮಾರು ಐದು ವರ್ಷಗಳಾಗಿದ್ದರೂ ಶ್ವಾನದ ಸುಳಿವೇ ಸಿಕ್ಕಿರಲಿಲ್ಲ. ಕಾಣೆಯಾದ ಸುಮಾರು 1,645 ದಿನಗಳ ನಂತರ, ಚೋಕೊ ಸುಳಿವು ಮೈಕ್ರೋಚಿಪ್‌ನಲ್ಲಿ ಪತ್ತೆಯಾಗಿದೆ. ಆದರೆ ಅದು ಕ್ಯಾಲಿಫೋರ್ನಿಯಾ ಸುತ್ತಮುತ್ತ ಇರಲಿಲ್ಲ. ಬದಲಾಗಿ ದೂರದ ಡೆಟ್ರಾಯಿಟ್‌ನಲ್ಲಿತ್ತು.
