ಉದಯವಾಹಿನಿ, ಹೈದರಾಬಾದ್ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗೋಟ್ ಇಂಡಿಯಾ ಪ್ರವಾಸದ ಭಾಗವಾಗಿ ಭಾರತಕ್ಕೆ ಬಂದಿರುವ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಲಿದ್ದಾರೆ.
ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಫಲಕ್ನುಮಾ ಪ್ಯಾಲೇಸ್ ಹೋಟೆಲ್‌ಗೆ ತೆರಳಲಿದ್ದು, ಅಲ್ಲಿ ಅವರು ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ. ಮೆಸ್ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದ ತಂಡಗಳ ನಡುವಿನ ಸೌಹಾರ್ದ ಪಂದ್ಯಕ್ಕೆ ರಾಹುಲ್ ಸಾಕ್ಷಿಯಾಗಲಿದ್ದಾರೆ. ಮೆಸ್ಸಿ ಸಂಜೆ 4 ಗಂಟೆಗೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಗುರುವಾರ ದೆಹಲಿಗೆ ಭೇಟಿ ನೀಡಿದ್ದ ರೇವಂತ್ ರೆಡ್ಡಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆಹ್ವಾನಿಸಿದ್ದರು. ಏತನ್ಮಧ್ಯೆ, ಶನಿವಾರ ರಾತ್ರಿ ಒಂದು ಗಂಟೆ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮೈದಾನದಲ್ಲಿ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೆಸ್ಸಿ ಈಗಾಗಲೇ ಕೋಲ್ಕತ್ತಾಗೆ ಆಮಮಿಸಿದ್ದು ಅಲ್ಲಿ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮೆಸ್ಸಿ ವಿರುದ್ಧ RR9 ತಂಡವನ್ನು ಮುನ್ನಡೆಸಲಿರುವ ಸಿಎಂ ರೇವಂತ್ ರೆಡ್ಡಿ, ಕಳೆದ ಕೆಲವು ದಿನಗಳಿಂದ ನಗರದ ವಿವಿಧ ಮೈದಾನಗಳಲ್ಲಿ ಫುಟ್ಬಾಲ್ ಆಟಗಾರರೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಪಂದ್ಯವನ್ನು ಮೆಸ್ಸಿಯ ‘ಗೋಟ್ ಟೂರ್ 2025’ನ ಭಾಗವಾಗಿ ಆಡಲಾಗುತ್ತಿದೆ. ರೇವಂತ್ ರೆಡ್ಡಿ9 ನೇ ಸಂಖ್ಯೆಯ ಜೆರ್ಸಿಯನ್ನು ಮತ್ತು ಮೆಸ್ಸಿ ಅವರ ಪ್ರಸಿದ್ಧ ಜೆರ್ಸಿ ಸಂಖ್ಯೆ 10 ಅನ್ನು ಧರಿಸಿ ಆಡಲಿದ್ದಾರೆ.
