ಉದಯವಾಹಿನಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 4 ಮಂದಿ ಆಟಗಾರರನ್ನು ಭ್ರಷ್ಟಚಾರ ಆರೋಪದ ಹಿನ್ನೆಲೆ ಶುಕ್ರವಾರ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಅಮಾನತುಗೊಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಈ ಕುರಿತು ಈಗಾಗಲೇ ತನಿಖೆ ಕೈಗೆತ್ತಿಕೊಂಡಿದೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೆ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ ಮಾಹಿತಿ ಬಂದ ಕೂಡಲೇ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಅಮಿತ್ ಸಿನ್ಹಾ, ಇಶಾನ್ ಅಹ್ಮದ್, ಅಮನ್ ತ್ರಿಪಾಠಿ ಮತ್ತು ಅಭಿಷೇಕ್ ಠಾಕೂರಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಅಮಾನತುಗೊಂಡಿರುವ ಈ ಆಟಗಾರರು ವಿವಿಧ ಹಂತಗಳಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸಿದ್ದು, ಲಖನೌದಲ್ಲಿ ನವೆಂಬರ್ 26ರಿಂದ ಡಿಸೆಂಬರ್ 8ರವರೆಗೆ ನಡೆದ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವೇಳೆ ಅಸ್ಸಾಂ ತಂಡದ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಪ್ರಚೋಧನೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
