ಉದಯವಾಹಿನಿ, ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ತಂಡ, ಸ್ಪೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಹಾರ್ಡಿ ಹಾಗೂ ಜಾಶ್ ಫಿಲಿಪ್ ಅವರನ್ನು ರಿಲೀಸ್ ಮಾಡಿತ್ತು. ಆ ಮೂಲಕ ಸಾಕಷ್ಟು ಮಂದಿಗೆ ಅಚ್ಚರಿ ಮೂಡಿಸಿತ್ತು. ಇದೀಗ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರು, ಈ ಮೂವರು ಆಟಗಾರರನ್ನು ಬಿಡುಗಡೆ ಮಾಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಈ ಮೂವರು ಆಟಗಾರರ ಪೈಕಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕೈ ಬಿಟ್ಟಿದ್ದು ಪಂಜಾಬ್ ಕಿಂಗ್ಸ್‌ಗೆ ನಷ್ಟವಾಗಿದೆ. ಏಕೆಂದರೆ ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವಿದೆ.
ಡಿಸೆಂಬರ್ 16ರಂದು ನಡೆಯುವ ಐಪಿಎಲ್ ಮಿನಿ-ಹರಾಜಿಗೂ ಮುನ್ನ ವಿದೇಶಿ ಸ್ಥಾನಗಳನ್ನು ಮುಕ್ತಗೊಳಿಸುವುದು ನಿರ್ಣಾಯಕವಾಗಿತ್ತು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದರಿಂದ ಫ್ರಾಂಚೈಸಿಗೆ ಸಮತೋಲಿತ ತಂಡವನ್ನು ನಿರ್ಮಿಸಲು ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ. 2025ರ ಐಪಿಎಲ್ ರನ್ನರ್-ಅಪ್ ಹರಾಜಿನಲ್ಲಿ ನಿರ್ದಿಷ್ಟ ಆಟಗಾರರನ್ನು ಗುರಿಯಾಗಿಸಲು ತಮ್ಮ ವಿದೇಶಿ ವಿಭಾಗವನ್ನು ಮರುಸಂಘಟಿಸಲು ಎದುರು ನೋಡುತ್ತಿದೆ. ಈ ಕಾರಣದಿಂದ ವಿದೇಶಿ ಆಟಗಾರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷ ನಾವು ಬಿಡುಗಡೆಗೊಳಿಸಿದ ಆಟಗಾರರ ಪೈಕಿ ಗ್ಲೆನ್ ಮ್ಯಾಕ್ಸ್‌ವೆಲ್ ದೊಡ್ಡ ಆಟಗಾರ. ದೀರ್ಘಾವಧಿ ನಾನು ಗ್ಲೆನ್ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ಪಂದ್ಯಕ್ಕೆ ತಂದುಕೊಡುವುದನ್ನು ನಾನು ಇಷ್ಟಪಡುತ್ತೇನೆ. ಕಳೆದ ವರ್ಷ ಅವರಿಂದ ನಾವು ನಿರೀಕ್ಷೆ ಮಾಡಿದ್ದ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹಾಗಾಗಿ ನಾವು ತಂಡವನ್ನು ಬದಲಾಯಿಸಲು ಬಯಸುತ್ತಿದ್ದೇವೆ. ನಾವು ರಿಲೀಸ್ ಮಾಡಿದ ವಿದೇಶಿ ಆಲ್‌ರೌಂಡರ್ ಆರೋನ್ ಹಾರ್ಡಿ ಇದ್ದಾರೆ. ಕಳೆದ ಸೀಸನ್‌ನಲ್ಲಿ ಇವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಈ ಆಟಗಾರರನ್ನು ಬಿಡಲು ನಮಗೆ ಇಷ್ಟವಿರಲಿಲ್ಲ ಆದರೆ, ಮಿನಿ ಹರಾಜಿಗೂ ಮುನ್ನ ವಿದೇಶಿ ಆಟಗಾರರ ಸ್ಥಾನಗಳಲ್ಲಿ ಖಾಲಿ ಮಾಡುವ ಅಗತ್ಯ ನಮಗಿದೆ. ಅನಿರೀಕ್ಷಿತವಾಗಿ ಹಾರ್ಡಿ ಅವರನ್ನು ಬಿಡುಗಡೆ ಮಾಡಲಾಗಿದೆ.
