ಉದಯವಾಹಿನಿ , ಭುವನೇಶ್ವರ : ಮಾನಸಿಕ ಖಿನ್ನತೆಯು ಇಂದು ಪ್ರಪಂಚದಾದ್ಯಂತ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮಿದೆ. ಖಿನ್ನತೆಯಿಂದ ಬಳಲುತ್ತಿರುವ ಅನೇಕರು ಮೌನ ಹೋರಾಟಗಳ ಮೂಲಕ ಮರೆಯಾಗಿ ಹೋಗುತ್ತಾರೆ. ಅದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಆದರೆ, ಕೆಲವೊಮ್ಮೆ ಒಂದು ಸಣ್ಣ ವೈಯಕ್ತಿಕ ನಿರ್ಧಾರವು ಸಮಾಜಕ್ಕೆ ಪ್ರಬಲ ಉದಾಹರಣೆಯಾಗಿ ಬದಲಾಗಬಹುದು. ಭುವನೇಶ್ವರದ ಲಕ್ಷ್ಮಿಪ್ರಿಯಾ ಭೋಯ್ ಅವರ ಕಥೆಯೂ ಇಂತಹುದ್ದೇ ಆಗಿದೆ.ಮಾನಸಿಕ ಖಿನ್ನತೆಯ ವಿರುದ್ಧದ ಹೋರಾಟವು ಅವರನ್ನು ರಸ್ತೆಬದಿಯ ಆಹಾರ ಅಂಗಡಿ ಪ್ರಾರಂಭಿಸಲು ಪ್ರೇರಣೆಯಾಗಿದೆ. ಸಣ್ಣದಾಗಿ ಆರಂಭವಾದ ರಸ್ತೆ ಬದಿ ಅಂಗಡಿ ಈಗ ಪೂರ್ಣ ಪ್ರಮಾಣದ ರೆಸ್ಟೋರೆಂಟ್ ಆಗಿ ಬೆಳೆದು ನಿಂತಿದೆ.
ಲಕ್ಷ್ಮಿಪ್ರಿಯಾ ಅವರ ವೈಯಕ್ತಿಕ ಜೀವನದಲ್ಲಿ ವರ್ಷಗಳ ಭಾವನಾತ್ಮಕ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು. ಪದೇ ಪದೆ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ಅವರು ಗರ್ಭಿಣಿಯಾಗಲು ಸಾಧ್ಯವಾಗಿರಲಿಲ್ಲ. ಕಾಲಾನಂತರದಲ್ಲಿ ಅವರ ಸುತ್ತಲಿನ ಜನರ ಬದಲಾದ ನಡವಳಿಕೆಯು ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಕುಟುಂಬ ಸದಸ್ಯರು ಅವರ ನಡೆನುಡಿಗಳನ್ನು ಗಮನಿಸಿದರು. ಅವರ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಮನೆಯ ಹೊರಗೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.ಕೋವಿಡ್​ ನಂತರ ಬದಲಾದ ಬದುಕು; COVID-19 ಸಾಂಕ್ರಾಮಿಕದ ನಂತರ ಮನೆಯ ಊಟಕ್ಕೆ ಬೇಡಿಕೆ ಹೆಚ್ಚಾದಾಗ ಅವರು ಬೀದಿ ಬದಿ ಆಹಾರದ ಸ್ಟಾಲ್​ ತೆರೆಯಲು ಪ್ರೇರಣೆ ನೀಡಿತು. ಲಕ್ಷ್ಮಿಪ್ರಿಯಾ ಅವರ ರೋಟಿ ಕಾರ್ನರ್ ಸೆಪ್ಟೆಂಬರ್ 2022 ರಲ್ಲಿ ಒಂದು ಟೇಬಲ್‌ನೊಂದಿಗೆ ಪ್ರಾರಂಭವಾಯಿತು. ಇಲ್ಲಿ ಅವರು ಮನೆಯಲ್ಲಿಯೇ ಅಡುಗೆಯನ್ನು ತಯಾರಿಸಿ ನೀಡಲು ಪ್ರಾರಂಭಿಸಿದರು. ಆರಂಭದಲ್ಲಿ ಭೋಜನಕ್ಕೆ ರೊಟ್ಟಿ, ಸಂತುಲಾ ಮತ್ತು ದಾಲ್ಮಾವನ್ನು ನೀಡುತ್ತಿದ್ದರು. ಮೊದಲ ದಿನ ಅವರು ಇದರಿಂದ ಸುಮಾರು 500 ರೂ.ಗಳ ಆದಾಯವನ್ನು ಗಳಿಸಿದರು. ಅವರು ತಯಾರಿಸಿದ್ದ ಆಹಾರ ಸಂಪೂರ್ಣ ಮಾರಾಟವಾಗಿತ್ತು. ಇದು ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತ್ತು.
ರಸ್ತೆ ಬದಿಯಿಂದ ಹವಾನಿಯಂತ್ರಿತ ರೆಸ್ಟೋರೆಂಟ್​: ಅವರ ಅಡುಗೆಗೆ ಬಂದ ಪ್ರತಿಕ್ರಿಯೆಗಳು ಅವರಲ್ಲಿ ಅಚ್ಚರಿಯನ್ನು ತರಿಸಿತ್ತು. ಒಂದು ವಾರದೊಳಗೆ ಅವರ ವಹಿವಾಟ ದಿನಕ್ಕೆ 3,000 ರೂಪಾಯಿ ದಾಟಿತು. ಗ್ರಾಹಕರು ಉಪಹಾರ ಮತ್ತು ಊಟಕ್ಕೂ ಬೇಡಿಕೆಯಿಡಲು ಪ್ರಾರಂಭಿಸಿದರು. ಬೆಳಗಿನ ಟಿಫಿನ್ ನಲ್ಲಿ ರೊಟ್ಟಿ, ಪರಾಠ, ಉಪ್ಪಿಟ್ಟು ಮತ್ತು ಬಟಾಣಿಗಳೊಂದಿಗೆ ಪೂರಿಗೆ ಭರ್ಜರಿ ಬೇಡಿಕೆ ಬಂತು. ಇನ್ನು ಬೇಡಿಕೆ ಹೆಚ್ಚಾದಂತೆ ಊಟದ ಸೇವೆಗಳು ಸಹ ಪ್ರಾರಂಭವಾದವು. ಆ ಸಮಯದಲ್ಲಿ ಯಾವುದೇ ಆಸನ ವ್ಯವಸ್ಥೆ ಇರಲಿಲ್ಲ ಮತ್ತು ಪಾರ್ಸೆಲ್‌ಗಳನ್ನು ಮಾತ್ರ ನೀಡಲಾಗುತ್ತಿತ್ತು. ಕ್ರಮೇಣ, ರಸ್ತೆಬದಿಯ ಅಂಗಡಿಯು ಈಗ ಹವಾನಿಯಂತ್ರಿತ ರೆಸ್ಟೋರೆಂಟ್ ಆಗಿ ರೂಪಾಂತರಗೊಂಡಿದೆ.

Leave a Reply

Your email address will not be published. Required fields are marked *

error: Content is protected !!