ಉದಯವಾಹಿನಿ , ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ವಿರಗನೂರು ಬಳಿಯ ಐರಾವತನಲ್ಲೂರು ಎಂಬ ಸಣ್ಣ ಹಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಜಲ್ಲಿಕಟ್ಟು ಸ್ಪರ್ಧೆಗಾಗಿ ಗೂಳಿಗಳನ್ನ ಸಾಕುವುದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಬಲಾಢ್ಯವಾದ ಗೂಳಿಗಳನ್ನು ಹಿಡಿಯಲು ಪುರುಷರೇ ಹಿಂಜರಿಯುವಾಗಿ ಈ ಯುವತಿ ಯಾವುದೇ ಭಯವಿಲ್ಲದೇ ಜಲ್ಲಿಕಟ್ಟಿಗಾಗಿ ಗಟ್ಟಿಮುಟ್ಟಾದ ಬಲಿಷ್ಠ ಗೂಳಿಗಳನ್ನ ಸಾಕುತ್ತಿದ್ದಾಳೆ.
ಅನುಪ್ಪನಡಿ ಬಳಿಯ ಸೌರಾಷ್ಟ್ರ ಮಹಿಳಾ ಕಾಲೇಜಿನಲ್ಲಿ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿರುವ 21 ವರ್ಷದ ಯೋಗದರ್ಶಿನಿ, ತನ್ನ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತನ್ನ ಕುಟುಂಬದ ತೋಟದಲ್ಲಿ ‘ವೀರ’, ‘ರೋಲೆಕ್ಸ್’ ಮತ್ತು ‘ಕರುಪ್ಪು’ ಎಂಬ ಮೂರು ಗೂಳಿಗಳನ್ನು ಸಾಕುತ್ತಿದ್ದಾಳೆ. ಪುರುಷರಷ್ಟೇ ಏಕೆ ನಾವು ರೆಡಿ ಅಂತಿದ್ದಾಳೆ ಈ ಯುವತಿ: ಗೂಳಿಗಳನ್ನು ಸಾಕುವಲ್ಲಿ ಪುರುಷರು ಮಾತ್ರ ತೊಡಗಿಸಿಕೊಳ್ಳುತ್ತಾರೆ ಎಂಬುದು ನಮ್ಮ – ನಿಮ್ಮಲ್ಲಿ ಇರುವ ಸಾಮಾನ್ಯ ಕಲ್ಪನೆ. ಆದರೆ, ವಾಸ್ತವದಲ್ಲಿ, ಜಲ್ಲಿಕಟ್ಟು ಎತ್ತುಗಳನ್ನು ಸಾಕುತ್ತಾ ಮತ್ತು ಸ್ಪರ್ಧೆಗಳಿಗಾಗಿ ವಿವಿಧ ಹಳ್ಳಿಗಳಿಗೆ ಕರೆದೊಯ್ಯುವ ಧೈರ್ಯಶಾಲಿ ತಮಿಳು ಮಹಿಳೆಯರಿದ್ದಾರೆ. ಅವರು ಅವುಗಳನ್ನು ‘ವಾಡಿವಾಸಲ್’ (ಸ್ಪರ್ಧಾತ್ಮಕ ಅಖಾಡ)ದಲ್ಲಿ ಬಿಡುಗಡೆ ಮಾಡುತ್ತಾರೆ. ಅಂತಹವರಲ್ಲಿ ಯೋಗದರ್ಶಿನಿಯೂ ಒಬ್ಬರು.
ಕಾಲೇಜಿಗೆ ಹೋಗುವಾಗ ಜಮೀನಿನಲ್ಲಿ ಎತ್ತುಗಳನ್ನು ಕಟ್ಟಿ ಸಂಜೆ ಮನೆಗೆ ಕರೆತರುವುದು ಅವಳ ನಿತ್ಯದ ಕಾಯಕ. ಯೋಗದರ್ಶಿನಿ ನಿತ್ಯವು ತನ್ನ ಎತ್ತುಗಳೊಂದಿಕಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾಳೆ. ಅವುಗಳನ್ನು ಪ್ರೀತಿಯಿಂದ ಸಾಕುತ್ತಾಳೆ.
ಗೂಳಿಗಳ ಸಾಕಣೆ ಮೂರು ತಲೆಮಾರುಗಳ ಇತಿಹಾಸ; ನನ್ನ ಅಜ್ಜನ ಕಾಲದಿಂದ ಅಂದರೆ ಸುಮಾರು ಮೂರು ತಲೆಮಾರುಗಳಿಂದ ಜಲ್ಲಿಕಟ್ಟು ಸ್ಪರ್ಧೆಗೆ ಅಂತಾನೆ ಎತ್ತುಗಳನ್ನು ಸಾಕುತ್ತಿದ್ದೇವೆ. ನಾನು ಎತ್ತುಗಳೊಂದಿಗೆ ಬೆಳೆದಿದ್ದೇನೆ. ಜಲ್ಲಿಕಟ್ಟು ನಿಷೇಧದ ಬಳಿಕ ನಡೆದ ಹೋರಾಟಗಳ ಸಂದರ್ಭದಲ್ಲಿ ಎತ್ತುಗಳ ಮೇಲಿನ ನನ್ನ ಬಾಂಧವ್ಯ ಇನ್ನಷ್ಟು ಬಲವಾಯಿತು. 10 ನೇ ವಯಸ್ಸಿನಿಂದ ನಾನು ಎತ್ತುಗಳನ್ನು ಜಲ್ಲಿಕಟ್ಟು ಸ್ಪರ್ಧೆಗಳಿಗೆ ಕರೆದೊಯ್ಯಲು ಪ್ರಾರಂಭಿಸಿದೆ. ನಾನು ನನ್ನ ಎತ್ತುಗಳನ್ನು ಸಕುಡಿ ಜಲ್ಲಿಕಟ್ಟಿನಲ್ಲಿ ಅಖಾಡಕ್ಕೆ ಇಳಿಸಿದೆ ಎಂದು ಅವರು ETV ಭಾರತದೊಂದಿಗೆ ಮಾತನಾಡುತ್ತಾ ತಿಳಿಸಿದರು.
