ಉದಯವಾಹಿನಿ, ಮಾಸ್ಕೋ: ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ರಷ್ಯಾದ ಬಿಲಿಯನೇರ್ ಪಾವೆಲ್ ಡುರೊವ್, ತಮ್ಮ ವೀರ್ಯ ದಾನವನ್ನು ಬಳಸಿಕೊಂಡು ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಇನ್ ವಿಟ್ರೊ ಫರ್ಟಿಲೈಸೇಶನ್ ಚಿಕಿತ್ಸೆಗೆ ಹಣಕಾಸು ನೆರವು ನೀಡಲು ಮುಂದಾಗಿದ್ದಾರೆ. ಈ ಮೂಲಕ ಜನಿಸುವ ತಮ್ಮ ಎಲ್ಲಾ ಜೈವಿಕ ಮಕ್ಕಳಿಗೂ ಭವಿಷ್ಯದಲ್ಲಿ ತಮ್ಮ ಸಂಪತ್ತಿನಲ್ಲಿ ಸಮಾನ ಪಾಲು ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, 41 ವರ್ಷದ ಡುರೊವ್ 37 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಿವಾಹಿತ ಮಹಿಳೆಯರು ತಮ್ಮ ವೀರ್ಯವನ್ನು ಬಳಸಿಕೊಂಡು ಗರ್ಭಧರಿಸಲು ಬಯಸಿದರೆ IVF ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ತನ್ನ ಮರಣದ ನಂತರ ಸುಮಾರು 30 ವರ್ಷಗಳ ಬಳಿಕ, ತಮ್ಮೊಂದಿಗೆ ಆನುವಂಶಿಕ ಸಂಪರ್ಕವನ್ನು ಕಾನೂನುಬದ್ಧವಾಗಿ ಸ್ಥಾಪಿಸಿದ ಮಕ್ಕಳು ತಮ್ಮ ಆಸ್ತಿಯ ಪಾಲನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಲೆಕ್ಸ್ ಫ್ರೀಡ್‌ಮನ್ ಅವರ ಪಾಡ್ ಕ್ಯಾಸ್ಟ್ ಗೆ ಅಕ್ಟೋಬರ್ ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡುರೊವ್, “ನನ್ನ DNA ಹಂಚಿಕೊಂಡಿರುವ ಮಕ್ಕಳಿಗೆ ನನ್ನ ಮರಣದ ನಂತರ ಆಸ್ತಿಯಲ್ಲಿ ಪಾಲು ಸಿಗಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ. ವೀರ್ಯ ದಾನದ ಮೂಲಕ ಈಗಾಗಲೇ ಕನಿಷ್ಠ 100 ಮಕ್ಕಳಿಗೆ ತಂದೆಯಾಗಿರುವುದಾಗಿ ಡುರೊವ್ ಹೇಳಿಕೊಂಡಿದ್ದಾರೆ. ಇವರಲ್ಲಿ ಆರು ಮಕ್ಕಳು ಮೂರು ವಿಭಿನ್ನ ಸಂಗಾತಿಗಳಿಂದ ಜನಿಸಿದ್ದಾರೆ ಎನ್ನಲಾಗಿದೆ. ಫಲವತ್ತತೆ ಸಮಸ್ಯೆ ಎದುರಿಸುತ್ತಿದ್ದ ಸ್ನೇಹಿತರಿಗೆ ನೆರವಾಗುವ ಉದ್ದೇಶದಿಂದ 2010ರಲ್ಲಿ ವೀರ್ಯ ದಾನ ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!