ಉದಯವಾಹಿನಿ, ತಿರುವನಂತಪುರಂ : ಕೇರಳ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ. 101 ಮತಗಳ ಪೈಕಿ 50 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿ.ವಿ.ರಾಜೇಶ್ ಗೆಲುವು ಸಾಧಿಸಿದ್ದು, ತಿರುವನಂತಪುರ ನಗರ ಪಾಲಿಕೆಯಲ್ಲಿ ನಾಲ್ಕು ದಶಕಗಳ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಆಳ್ವಿಕೆಗೆ ಅಂತ್ಯ ಹಾಡಿದ್ದಾರೆ.
ವಿ.ವಿ. ರಾಜೇಶ್ ಶುಕ್ರವಾರ ಮಧ್ಯಾಹ್ನ ತಿರುವನಂತಪುರಂನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭ ವೀಕ್ಷಿಸಲು ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, “ನಾವು ಎಲ್ಲರ ಜತೆಗೂಡಿ ಮುಂದೆ ಸಾಗುತ್ತೇವೆ. ಎಲ್ಲ 101 ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ತಿರುವನಂತಪುರಂ ಮಾದರಿ ನಗರವನ್ನಾಗಿ ರೂಪಿಸುತ್ತೇವೆ” ಎಂದು ಹೇಳಿದರು.
ಬಿಜೆಪಿ ಇದುವರೆಗೆ ಕೇರಳದಲ್ಲಿ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿಯು ಕೇವಲ ಒಂದು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಇದೀಗ 45 ವರ್ಷದ ರಾಜೇಶ್ 100 ಮತಗಳಲ್ಲಿ ಬಹುಮತಕ್ಕೆ ಅಗತ್ಯವಿರುವ 51 ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಆರ್.ಪಿ. ಶಿವಾಜಿ 29 ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್‌ಗೆ 19 ಮತಗಳು ಲಭಿಸಿವೆ. ಸ್ವತಂತ್ರವಾಗಿ ಆಯ್ಕೆಯಾಗಿದ್ದ ಒಬ್ಬ ಅಭ್ಯರ್ಥಿ ಮತದಾನದಿಂದ ದೂರ ಉಳಿದರು. ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಪಿ. ರಾಧಾಕೃಷ್ಣನ್ ಅವರ ಬೆಂಬಲದಿಂದ ರಾಜೇಶ್ ಅವರ ಗೆಲುವು ಸಾಧ್ಯವಾಯಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, “ಸಿಪಿಐ(ಎಂ) ತಿರುವನಂತಪುರಂ ಸಂಪೂರ್ಣವಾಗಿ ಹಿಂದುಳಿಯುವಂತೆ ಮಾಡಿದೆ. ದುರದೃಷ್ಟವಶಾತ್, ಈ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಗೂಡಾಗಿ ಪರಿಣಮಿಸಿದೆ. ಪ್ರಚಾರದ ವೇಳೆ ನಾವು ಬಹಿರಂಗಪಡಿಸಿದಂತೆ, ಈ ಪಾಲಿಕೆಯ ಹಣವನ್ನು ದುರಪಯೋಗಪಡಿಸಿಕೊಂಡಿದೆ. ಒಳಚರಂಡಿ, ನೀರು ಸರಬರಾಜು ಮತ್ತು ಘನ ತ್ಯಾಜ್ಯ ನಿರ್ವಹಣೆ ಎಂಬ ಮೂಲಭೂತ ಸಮಸ್ಯೆಗಳನ್ನೂ ಕಳೆದ 45 ವರ್ಷಗಳಿಂದ ನಿರ್ಲಕ್ಷಿಸಲಾಗಿದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!