ಉದಯವಾಹಿನಿ,  ದಿಗ್ಗಜ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ಸಂಸ್ಥೆಯನ್ನು 1996 ರಲ್ಲಿ ಸ್ಥಾಪಿಸಿತ್ತು. ಸರ್ ಡಾನ್ ಬ್ರಾಡ್ಮನ್ ಸೇರಿದಂತೆ ಅನೇಕ ಆಸ್ಟ್ರೇಲಿಯಾದ ದಿಗ್ಗಜರನ್ನು ಹಾಲ್ ಆಫ್ ಫೇಮ್‌ಗೆ ಈಗಾಗಲೇ ಸೇರಿಸಲಾಗಿದೆ. ಬ್ರೆಟ್‌ ಲೀಗ್‌ ತಮ್ಮ ವೃತ್ತಿಜೀವನದ ಅವಧಿಯಲ್ಲಿ ತಮ್ಮ ವೇಗ ಮತ್ತು ಲೈನ್‌ ಅಂಡ್‌ ಲೆನ್ತ್‌ಗೆ ಹೆಸರುವಾಸಿಯಾಗಿದ್ದರು. ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಶೋಯೆಬ್ ಅಖ್ತರ್ ಜೊತೆಗೆ ಪರಿಗಣಿಸಲಾಗುತ್ತದೆ. ಬ್ರೆಟ್ ಲೀ 1999ರಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ವಿರುದ್ಧದ ತಮ್ಮ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು.
ಬ್ರೆಟ್ ಲೀ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಎಸೆತದ ದಾಖಲೆಯನ್ನು ಹೊಂದಿದ್ದಾರೆ. 2003 ರಲ್ಲಿ ಅವರು ಶ್ರೀಲಂಕಾದ ಬ್ಯಾಟ್ಸ್‌ಮನ್ ಮಾರ್ವನ್ ಅಟಪಟ್ಟುಗೆ ಗಂಟೆಗೆ 161.1 ಕಿಮೀ ವೇಗದ ಎಸೆತವನ್ನು ಹಾಕಿ ಔಟ್ ಮಾಡಿದ್ದರು. ಶೋಯೆಬ್ ಅಖ್ತರ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಚೆಂಡಿನ ದಾಖಲೆಯನ್ನು ಹೊಂದಿದ್ದಾರೆ. 2003ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಗಂಟೆಗೆ 161.3 ಕಿ.ಮೀ ವೇಗದಲ್ಲಿ ಚೆಂಡನ್ನು ಹಾಕಿದ್ದರು.

ವಿಶ್ವಕಪ್ ವಿಜೇತ ತಂಡದ ಭಾಗ
ಬ್ರೆಟ್‌ ಲೀ 2003ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. ಅವರು 2006 ಮತ್ತು 2009 ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಗಳ ಭಾಗವಾಗಿದ್ದರು. ಅವರು 2008ರಲ್ಲಿ ಆಸ್ಟ್ರೇಲಿಯಾದ ವರ್ಷದ ಟೆಸ್ಟ್ ಆಟಗಾರ ಎಂಬ ಗೌರವಕ್ಕೆ ಭಾಜನರಾಗಿದ್ದರು. ಪ್ರತಿಷ್ಠಿತ ಅಲಾನ್ ಬಾರ್ಡರ್ ಪದಕವನ್ನು ಕೂಡ ಪಡೆದಿದ್ದರು. ಲೀ ಬಿಗ್ ಬ್ಯಾಷ್ ಲೀಗ್, ಐಪಿಎಲ್ ಮತ್ತು ಇತರ ಹಲವಾರು ಟಿ20 ಲೀಗ್‌ಗಳಲ್ಲಿಯೂ ಆಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಸಾಧನೆ ಕೂಡ ಬ್ರೆಟ್‌ ಲೀ ಹೆಸರಿನಲ್ಲಿದೆ.

Leave a Reply

Your email address will not be published. Required fields are marked *

error: Content is protected !!