ಉದಯವಾಹಿನಿ, ರಾಜ್ಯದ ಉನ್ನತ ನಾಯಕರಿಂದ ಹಿಡಿದು ಪೊಲೀಸ್ ಇಲಾಖೆಯವರೆಗೆ ನಿರಂತರ ಸಂಪರ್ಕ, ಸಭೆ, ಮನವಿ, ಚರ್ಚೆಗಳಾದರೂ ಚಿನ್ನಸ್ವಾಮಿ ಸ್ಟೇಡಿಯಂನ ಭವಿಷ್ಯ ಬದಲಾಗಲಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಹಗಲು-ರಾತ್ರಿ ಶ್ರಮಿಸಿದರೂ, ಪ್ರಯೋಜನವಾಗದೇ ಟಿ20 ವಿಶ್ವಕಪ್ ಆತಿಥ್ಯದಿಂದ ಚಿನ್ನಸ್ವಾಮಿ ಸಂಪೂರ್ಣವಾಗಿ ಹೊರಬಿದ್ದಿದೆ.
ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಒಟ್ಟು ಏಳು ಕೇಂದ್ರಗಳಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದ್ದು, ಭಾರತದಲ್ಲಿ ಐದು ಹಾಗೂ ಶ್ರೀಲಂಕಾದಲ್ಲಿ ಎರಡು ವೆನ್ಯೂಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಕರ್ನಾಟಕದ ಪ್ರತಿಷ್ಠಿತ ಚಿನ್ನಸ್ವಾಮಿ ಸ್ಟೇಡಿಯಂಗೆ ಒಂದೇ ಒಂದು ಪಂದ್ಯವೂ ಸಿಗದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗಿದೆ.
ವಿಶ್ವಕಪ್ ಪಂದ್ಯಗಳು ಕೈ ತಪ್ಪಿದರೂ, ಕನಿಷ್ಠ ಅಭ್ಯಾಸ ಪಂದ್ಯಗಳಾದರೂ ರಾಜ್ಯಕ್ಕೆ ಸಿಗಲಿ ಎಂಬ ನಿರೀಕ್ಷೆಯಲ್ಲಿ KSCA ಇನ್ನೂ ಪ್ರಯತ್ನ ಮುಂದುವರಿಸಿದೆ. ಆದರೆ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯ ಡೆಲ್ಲಿ ವಿರುದ್ಧ ಆಂಧ್ರ ಹಾಗೂ ಗುಜರಾತ್ ಪಂದ್ಯಗಳನ್ನು ಚಿನ್ನಸ್ವಾಮಿಯಿಂದ ಬೇರೆಡೆಗೆ ಸ್ಥಳಾಂತರಿಸಿದ್ದು, ಆತಂಕವನ್ನು ಹೆಚ್ಚಿಸಿದೆ. ಈ ಪಂದ್ಯಗಳು ದೇವನಹಳ್ಳಿ ಬಳಿಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿವೆ. ಇದರ ಬೆನ್ನಲ್ಲೇ ಐಪಿಎಲ್ ಪಂದ್ಯಗಳ ಭವಿಷ್ಯವೂ ಅನುಮಾನಕ್ಕೆ ಒಳಗಾಗಿದೆ. ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾ ವರದಿಯ ಶಿಫಾರಸ್ಸುಗಳು ಹಾಗೂ ಭದ್ರತಾ, ನಿರ್ವಹಣಾ ಸಮಸ್ಯೆಗಳ ಕಾರಣ ಐಪಿಎಲ್‌ಗೆ ಚಿನ್ನಸ್ವಾಮಿ ಅನ್‌ಫಿಟ್ ಎನ್ನುವ ಮಾತು ಕೇಳಿಬರುತ್ತಿದೆ. ಆರ್‌ಸಿಬಿ ಫ್ರಾಂಚೈಸಿ ಮತ್ತು KSCA ನಡುವಿನ ಅಸಮಾಧಾನವೂ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
