ಉದಯವಾಹಿನಿ , ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ಓಹಿಯೋದ ಸಿನ್ಸಿನಾಟಿ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆ ಬಳಿಕ ಓರ್ವ ಶಂಕಿತನನ್ನ ಬಂಧಿಸಿರುವ ಪೊಲೀಸರು ತುರ್ತು ವಿಚಾರಣೆ ಆರಂಭಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮನೆಯ ಕಿಟಕಿ ಗಾಜುಗಳು ಒಡೆದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ದಾಳಿ ನಡೆದ ಸಮಯದಲ್ಲಿ ವ್ಯಾನ್ಸ್ ಮತ್ತು ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಜೊತೆಗೆ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಭೆಯ ಬಳಿಕ ವ್ಯಾನ್ಸ್ ವೆಸ್ಟ್ ಫಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್‌ನಲ್ಲಿದ್ದರು ಎನ್ನಲಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿದ ಬಳಿಕ ತಮ್ಮ ಸಿನ್ಸಿನಾಟಿ ನಿವಾಸಕ್ಕೆ ಮರಳಿದ್ದಾರೆ. ಇನ್ನೂ ಶಂಕಿತನನ್ನ ಬಂಧಿಸಿರುವ ಪೊಲೀಸರು ತುರ್ತು ವಿಚಾರಣೆ ಪ್ರಾರಂಭಿಸಿದ್ದಾರೆ. ಶಂಕಿತ ಮನೆ ಅಂಗಳ ಪ್ರವೇಶಿಸಿರಲಿಲ್ಲ, ದೂರದಿಂದಲೇ ಗುಂಡು ಹಾರಿಸಿದ್ದಾನೆ. ಇದು ವ್ಯಾನ್ಸ್ ಕುಟುಂಬದ ವಿರುದ್ಧ ಉದ್ದೇಶಿತ ಕೃತ್ಯವೇ ಅನ್ನೋದ್ರ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಮೆರಿಕದ ಸೀಕ್ರೆಟ್ ಸರ್ವೀಸ್ ಯಾವುದೇ ಸುಳಿವು ಕೊಟ್ಟಿಲ್ಲ. ಶಂಕಿತನ ಬಗೆಗಿನ ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ.
