ಉದಯವಾಹಿನಿ, ನವದೆಹಲಿ: ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಕ್ಯಾಚ್ ಪಡೆಯುವಾಗ ಬಿದ್ದು ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಇದಾದ ನಂತರ, ಅಯ್ಯರ್ ಆಸ್ಪತ್ರೆಗೆ ದಾಖಲಾಗಿ ಸ್ವಲ್ಪ ಸಮಯ ಐಸಿಯುನಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಗಾಯದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಿದ್ದರು ಹಾಗೂ ಅವರ ಚೇತರಿಕೆಗೂ ಸ್ವಲ್ಪ ಸಮಯ ಹಿಡಿದಿತ್ತು. ಅಂದ ಹಾಗೆ ಇದೀಗ ಸಂಪೂರ್ಣ ಫಿಟ್‌ ಆಗಿರುವ ಅವರು ನ್ಯೂಜಿಲೆಂಡ್‌ ವಿರುದ್ದದ ಏಕದಿನ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ಮುಂಬೈ ಪರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ.ಇದೀಗ ಸಂಪೂರ್ಣ ಫಿಟ್ ಆಗಿರುವ ಶ್ರೇಯಸ್‌ ಅಯ್ಯರ್‌ ಮೈದಾನಕ್ಕಿಳಿಯಲು ಸಿದ್ಧರಾಗಿದ್ದಾರೆ. ಶಾರ್ದುಲ್‌ ಠಾಕೂರ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದ ನಂತರ ವಿಜಯ್ ಹಜಾರೆ ಟ್ರೋಫಿ ಋತುವಿನ ಇನ್ನುಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರು ಮುಂಬೈ ತಂಡವನ್ನುಮುನ್ನಡೆಸಲಿದ್ದಾರೆ.
ಮುಂಬೈ ತಂಡದ ಮುಖ್ಯ ಆಯ್ಕೆದಾರ ಸಂಜಯ್ ಪಾಟೀಲ್ ಸೋಮವಾರ ಪಿಟಿಐಗೆ “ಶಾರ್ದುಲ್ ಗಾಯಗೊಂಡಿದ್ದು, ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಇತರ ಆಟಗಾರರು ನಮ್ಮಲ್ಲಿ ಲಭ್ಯವಿದ್ದು, ಉಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ,” ಎಂದು ತಿಳಿಸಿದರು. ಆದಾಗ್ಯೂ, ಠಾಕೂರ್ ಯಾವ ರೀತಿಯ ಗಾಯದಿಂದ ಬಳಲುತ್ತಿದ್ದರು ಎಂಬುದನ್ನು ಅವರು ನಿರ್ದಿಷ್ಟಪಡಿಸಲಿಲ್ಲ.

ಜನವರಿ 6 ರಂದು ಹಿಮಾಚಲ ಪ್ರದೇಶ ವಿರುದ್ಧದ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ, ಗಾಯಗೊಂಡ ನಂತರ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಇದರ ನಂತರ, ಮುಂಬೈ ಜನವರಿ 8 ರಂದು ಪಂಜಾಬ್ ವಿರುದ್ಧ ಸೆಣಸಲಿದೆ. ಅಯ್ಯರ್ ಎರಡೂ ಪಂದ್ಯಗಳಲ್ಲಿ ಆಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!