ಉದಯವಾಹಿನಿ , ಬೆಂಗಳೂರು: ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಮತ್ತು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಸೋಮವಾರ ತಮ್ಮ ಅಧಿಕೃತ ಪಾಲುದಾರಿಕೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದೆ. ನೀರಜ್ ತಮ್ಮದೇ ಕ್ರೀಡಾಪಟು ನಿರ್ವಹಣಾ ಸಂಸ್ಥೆ ‘ವೆಲ್ ಸ್ಪೋರ್ಟ್ಸ್’ ಅನ್ನು ಪ್ರಾರಂಭಿಸುವ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದಾರೆ. ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಜೊತೆಗಿನ ನೀರಜ್ ಅವರ ಸಂಪರ್ಕ 2016ರಲ್ಲಿ ಆರಂಭವಾಗಿದ್ದು, ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಎಕ್ಸಲೆನ್ಸ್ ಪ್ರೋಗ್ರಾಂ ಮೂಲಕ ಅವರನ್ನು ಮೊಟ್ಟಮೊದಲಾಗಿ ಗುರುತಿಸಲಾಗಿತ್ತು.

ನೀರಜ್ ಅವರನ್ನು ಪ್ರೀತಿಯಿಂದ ‘ಗೋಲ್ಡನ್ ಬಾಯ್’ ಎಂದು ಕರೆಯಲಾಗುತ್ತದೆ. ಟೋಕಿಯೋ 2020ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾಗಿರುವ ನೀರಜ್, 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಜೊತೆಗೆ ಜಾಗತಿಕ ವೇದಿಕೆಯಲ್ಲಿ ಅನೇಕ ಪೋಡಿಯಂ ಸಾಧನೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಇದೀಗ ‘ವೆಲ್ ಸ್ಪೋರ್ಟ್ಸ್’ ಮೂಲಕ ಉದ್ಯಮ ಲೋಕಕ್ಕೆ ಕಾಲಿಡುತ್ತಿದ್ದು, ಈ ಬೆಳವಣಿಗೆಯನ್ನು ರೂಪಿಸಲು JSW ಸ್ಪೋರ್ಟ್ಸ್ ಅವರೊಂದಿಗೆ ಕೈಜೋಡಿಸಿದೆ. ಈ ಕುರಿತು ಮಾತನಾಡಿದ JSW ಸ್ಪೋರ್ಟ್ಸ್‌ನ ಸಿಇಒ ದಿವ್ಯಾಂಶು ಸಿಂಗ್, “ನೀರಜ್ ಅವರೊಂದಿಗೆ ಕೆಲಸ ಮಾಡುವುದು JSW ಸ್ಪೋರ್ಟ್ಸ್‌ನ ಎಲ್ಲರಿಗೂ ಅದ್ಭುತ ಅನುಭವವಾಗಿತ್ತು. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ನಾವು ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ,” ಎಂದು ಹೇಳಿದರು.

ನೀರಜ್ ಚೋಪ್ರಾ ಮಾತನಾಡಿ, “ನನ್ನ ವೃತ್ತಿಜೀವನದಲ್ಲಿ JSW ಸ್ಪೋರ್ಟ್ಸ್ ನಿರ್ಣಾಯಕ ಪಾತ್ರವಹಿಸಿದೆ. ಅವರ ಬೆಂಬಲ ಮತ್ತು ದೃಷ್ಟಿಕೋನಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ,” ಎಂದರು.

Leave a Reply

Your email address will not be published. Required fields are marked *

error: Content is protected !!