ಉದಯವಾಹಿನಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಪ್ರಾಪ್ತ ಭಾರತೀಯ ಮಕ್ಕಳನ್ನು ಗುರಿಯಾಗಿಸಿಕೊಂಡಿರುವುದನ್ನು ಪಠಾಣ್‌ಕೋಟ್ ಪೊಲೀಸರು ಬಹಿರಂಗಪಡಿಸಿದ್ದಾರೆ. 15 ವರ್ಷದ ಬಾಲಕನನ್ನು ಬೇಹುಗಾರಿಕೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದು, ಕಳೆದ ಒಂದು ವರ್ಷದಿಂದ ಆತ ಪಾಕಿಸ್ತಾನದಲ್ಲಿರುವ ಐಎಸ್‌ಐ ಕಾರ್ಯಕರ್ತರಿಗೆ ಭಾರತದ ಪ್ರಮುಖ ಮಾಹಿತಿಯನ್ನು ರವಾನಿಸುತ್ತಿದ್ದನೆಂದು ತಿಳಿದುಬಂದಿದೆ.
ಗುಪ್ತಚರ ಮೂಲಗಳ ಪ್ರಕಾರ, ಬಾಲಕನ ಚಟುವಟಿಕೆಗಳ ಬಗ್ಗೆ ಸುಳಿವು ದೊರೆತ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯಲ್ಲಿ, ಪಂಜಾಬ್‌ನ ಇತರ ಜಿಲ್ಲೆಗಳಲ್ಲಿರುವ ಕೆಲವು ಅಪ್ರಾಪ್ತ ಮಕ್ಕಳೂ ಐಎಸ್‌ಐ ಸಂಪರ್ಕದಲ್ಲಿರುವ ಸಾಧ್ಯತೆ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದರಿಂದ ವಿಷಯದ ಗಂಭೀರತೆ ಮತ್ತಷ್ಟು ಹೆಚ್ಚಾಗಿದೆ. ಬಂಧಿತ ಬಾಲಕ ಜಮ್ಮುವಿನ ಸಾಂಬಾ ಜಿಲ್ಲೆಯವನೆಂದು ಪೊಲೀಸರು ತಿಳಿಸಿದ್ದಾರೆ. ಆತ ಸೂಕ್ಷ್ಮ ಮಿಲಿಟರಿ ತಾಣಗಳ ಫೋಟೋಗಳು, ಸ್ಥಳ ಮಾಹಿತಿ ಹಾಗೂ ಇತರ ಮಹತ್ವದ ವಿವರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಬಾಲಕನ ಮೊಬೈಲ್‌ನಿಂದ ಚಾಟ್‌ಗಳು ಮತ್ತು ಕರೆ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಠಾಣ್‌ಕೋಟ್ ಎಸ್‌ಎಸ್‌ಪಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ಮಾತನಾಡಿ, ಬಾಲಕ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಸಂಸ್ಥೆಗಳ ಬಲೆಗೆ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ತಂದೆಯ ಹತ್ಯೆಗೆ ಸಂಬಂಧಿಸಿದ ಅನುಮಾನ ಮತ್ತು ಮಾನಸಿಕ ಒತ್ತಡವನ್ನು ದುರುಪಯೋಗಪಡಿಸಿಕೊಂಡು ಐಎಸ್‌ಐ ಬಾಲಕನನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಗುಪ್ತಚರ ಹಾಗೂ ತಾಂತ್ರಿಕ ವಿಶ್ಲೇಷಣೆಯ ಬಳಿಕ ಬಾಲಕನ ಪಾಕಿಸ್ತಾನಿ ನಿರ್ವಾಹಕರೊಂದಿಗೆ ಇರುವ ನೇರ ಸಂಪರ್ಕ ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕ ಒಬ್ಬಂಟಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅನುಮಾನವೂ ವ್ಯಕ್ತವಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇತರ ಅಪ್ರಾಪ್ತ ಮಕ್ಕಳನ್ನು ಗುರುತಿಸಿ ರಕ್ಷಿಸಲು ವಿಶೇಷ ನಿಗಾವಹಿಸಲಾಗಿದೆ. ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿ ಪರಿಣಮಿಸುತ್ತಿರುವ ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!