ಉದಯವಾಹಿನಿ, ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಕರೆ ಮಾಡಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ, ಗಾಜಾ ಶಾಂತಿ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಭಯೋತ್ಪಾದನೆಯ ವಿರುದ್ಧ ಹೋರಾಡುವ ಸಂಕಲ್ಪವನ್ನೂ ಪುನರುಚ್ಚರಿಸಿದರು.
ಈ ಬಗ್ಗೆ ಪ್ರಧಾನಿ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಇಬ್ಬರೂ ನಾಯಕರು ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಎರಡೂ ದೇಶಗಳ ಜನರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದರು. ಗಾಜಾ ಶಾಂತಿ ಯೋಜನೆಯ ಅನುಷ್ಠಾನದ ಕುರಿತು ಪ್ರಧಾನಿಗೆ ವಿವರಿಸಿದರು” ಎಂದು ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು, “ಗಾಜಾದ ಜನರಿಗೆ ಸಿಗಬೇಕಾದ ನ್ಯಾಯ ಮತ್ತು ಶಾಂತಿಯುವ ಬದುಕಿಗೆ ಭಾರತದ ಬೆಂಬಲ ಇರಲಿದೆ” ಎಂದು ತಿಳಿಸಿದ್ದಾಗಿ ಪ್ರಧಾನಿ ಕಚೇರಿ ಹೇಳಿದೆ.
ಮುಂದಿನ ವರ್ಷದಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು, ಪರಸ್ಪರ ನಂಬಿಕೆ ಮತ್ತು ಭವಿಷ್ಯದ ದೃಷ್ಟಿಕೋನದಿಂದ ಉಭಯ ದೇಶಗಳ ನಡುವೆ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟ: ಇದೇ ವೇಳೆ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ವಿಧಾನವನ್ನು ಅನುಸರಿಸಲು ಉಭಯ ನಾಯಕರು ಒಮ್ಮರ ವ್ಯಕ್ತಪಡಿಸಿದರು. ಉಗ್ರವಾದದ ವಿರುದ್ಧ ಹೋರಾಡುವ ತಮ್ಮ ಬದ್ಧತೆ ಪುನರುಚ್ಚರಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
