ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಮನೆಯ ಬ್ಲಾಂಕೆಟ್ ಸಿಗುವುದು ಅನುಮಾನ.
ಸಿಕ್ಕಾಪಟ್ಟೆ ಚಳಿ ಆಗುತ್ತಿದ್ದು ಮನೆಯಿಂದ ನೀಡಿರುವ ಬ್ಲಾಂಕೆಟ್ ಕೊಡಿ ಎಂದು ಕೋರ್ಟ್ ಮೂಲಕ ದರ್ಶನ್ ಅನುಮತಿ ಪಡೆದುಕೊಂಡಿದ್ದರು. ಆದರೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ತಮ್ಮ ಅಧಿಕಾರ ಬಳಸಿಕೊಂಡು ಜೈಲಿನ ನಿಯಮಗಳ ಪ್ರಕಾರವೇ ಎಲ್ಲರಿಗೂ ಒಂದೇ ಮಾದರಿಯ ಬ್ಲಾಂಕೆಟ್ ನೀಡಲು ಮುಂದಾಗಿದ್ದಾರೆ.
ಚಳಿಗಾಲ, ಮಳೆಗಾಲ ಇವೆಲ್ಲವಕ್ಕೂ ಹೊಂದಾಣಿಕೆ ಆಗುವಂತಹ ಬ್ಲಾಂಕೆಟ್ ವಿತರಣೆಗೆ ಆದೇಶ ಹೊರಡಿಸಲು ತಯಾರಿ ನಡೆಸಲಾಗಿದೆ. ಈ ಆದೇಶ ಹೊರಡಿಸಿದರೆ ದರ್ಶನ್ ಬ್ಲಾಂಕೆಟ್‌ಗೆ ಕುತ್ತು ಬರುವ ಸಾಧ್ಯತೆ ಇದೆ. ಜೈಲು ಸೇರಿರುವ ಪವಿತ್ರಗೌಡಗೆ ಮನೆ ಊಟಕ್ಕೆ ಅನುಮತಿ ನೀಡದೇ ಇರಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡದೇ ಇರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.
