ಉದಯವಾಹಿನಿ, ದುಬೈ: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ.
ಎರಡು ಸಂಸ್ಥೆಗಳ ನಡುವಿನ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ತಿಳಿಸಲಾಗಿದೆ. ಬಾಂಗ್ಲಾದೇಶವು ಟೂರ್ನಿಗಾಗಿ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಪ್ರಯಾಣಿಸದಿದ್ದರೆ ಅಂಕಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರದ ಬಗ್ಗೆ ಐಸಿಸಿಯಾಗಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ತಿಳಿಸಿಲ್ಲ. ಐಸಿಸಿಯ ನಡೆಯ ಬಗ್ಗೆ ಬಾಂಗ್ಲಾ ನಿರ್ಧಾರ ಮುಂದೆ ಪ್ರಕಟವಾಗಲಿದೆ.
ಈಗಾಗಲೇ ಪಂದ್ಯದ ಸ್ಥಳಗಳು, ಹೋಟೆಲ್‌ಗಳು ಎಲ್ಲವೂ ಬುಕ್ಕಿಂಗ್ ಆಗಿರುವುದರಿಂದ ಕೂಡಲೇ ಬದಲಾವಣೆ ಅಸಾಧ್ಯ ಎಂಬ ಮಾತುಗಳು ಕೇಳಿ ಬಂದಿತ್ತು. ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಿಡುಗಡೆ ಮಾಡಿದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಬಿಸಿಬಿ ನಡುವಿನ ಸಂಬಂಧ ಹಳಸಿದೆ.
ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿದ ನಂತರ ಬಿಸಿಬಿ ಐಸಿಸಿಗೆ ಪತ್ರ ಬರೆದು, ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಬೇಕಾದರೆ ತನ್ನ ಆಟಗಾರರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ಪಂದ್ಯ ಹೈಬ್ರಿಡ್ ಮಾದರಿಯಲ್ಲಿ ಹೇಗೆ ಆಯೋಜನೆಗೊಂಡಿದೆಯೋ ಅದೇ ರೀತಿ ತನ್ನ ಪಂದ್ಯಗಳನ್ನು ಆಡಿಸಬೇಕೆಂದು ಬೇಡಿಕೆ ಇಟ್ಟಿತ್ತು.
