ಉದಯವಾಹಿನಿ, ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ ಹಾಗೂ ಮಾರ್ಚ್ ಅವಧಿಯಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತಂಡ ಪ್ರಕಟವಾಗಿದೆ. ಏಷ್ಯಾ ಉಪಖಂಡದಲ್ಲಿ ಸ್ಪಿನ್ ಸ್ನೇಹಿ ಕಂಡೀಷನ್ಸ್ ಇರುವ ಕಾರಣ ಕಿವೀಸ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಿನ್ನರ್‌ಗಳಿಗೆ ಅವಕಾಶವನ್ನು ನೀಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಾಕೋಬ್ ಡಫಿಗೆ ಅವಕಾಶವನ್ನು ನೀಡಲಾಗಿದೆ. 2025ರಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಕಾರಣ ಡಫಿಗೆ ಅವಕಾಶವನ್ನು ನೀಡಲಾಗಿದೆ.
ಜಾಕೋಬ್ ಡಫಿ 2025ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಸ್ವರೂಪದಲ್ಲಿಯೂ ಆಡಿದ 36 ಪಂದ್ಯಗಳಿಂದ 81 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಸರ್ ರಿಚರ್ಡ್ ಹ್ಯಾಡ್ಲಿ ಅವರ 40 ವರ್ಷಗಳ ಹಳೆಯ ದಾಖಲೆಯನ್ನು ಡಫಿ ಬ್ರೇಕ್ ಮಾಡಿದ್ದರು. ರಿಚರ್ಡ್ ಅವರು ಕ್ಯಾಲೆಂಡರ್ ವರ್ಷದಲ್ಲಿ 79 ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಜಾಕೋಬ್ ಡಫಿ ಒಂದು ವಿಕೆಟ್ ಹೆಚ್ಚಾಗಿ ಪಡೆದಿದ್ದಾರೆ. ಇದರ ಆಧಾರದ ಮೇಲೆ ಟಿ20 ವಿಶ್ವಕಪ್ ಕಿವೀಸ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ ಹಾಗೂ ಆಡಮ್ ಮಿಲ್ನೆ ಹಾಗೂ ಜೇಮ್ಸ್ ನೀಶಮ್ ಅವರ ಜೊತೆಗೆ ಕಿವೀಸ್ ಬೌಲಿಂಗ್ ವಿಭಾಗಕ್ಕೆ ಅತ್ಯುತ್ತಮ ಸಂಯೋಜನೆಯನ್ನು ತಂದಕೊಡಲಿದ್ದಾರೆ. ಕೈಲ್ ಜೇಮಿಸನ್ ಅವರನ್ನು ಮೀಸಲು ಬೌಲರ್ ಆಗಿ ಇರಿಸಿಕೊಳ್ಳಲಾಗಿದೆ. ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ಭಾರತ ಹಾಗೂ ಶ್ರೀಲಂಕಾ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿದ್ದು, ಇದಕ್ಕೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮೈಕಲ್ ಬ್ರೇಸ್‌ವೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಹಾಗೂ ರಚಿನ್ ರವೀಂದ್ರಾಗೆ ಅವಕಾಶ ನೀಡಲಾಗಿದೆ. ಇವರು ಸ್ಪಿನ್ ಬೌಲಿಂಗ್ ಮಾಡಬಲ್ಲರು.
ಮಿಚೆಲ್ ಸ್ಯಾಂಟ್ನರ್ ಜೊತೆಗೆ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಇಶ್ ಸೋಧಿಗೆ ಅವಕಾಶವನ್ನು ನೀಡಲಾಗಿದೆ. 2016ರಲ್ಲಿ ಇಶ್ ಸೋಧಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಿದ್ದರು. ಇದರ ಅನುಭವ ಇದೀಗ ಕಿವೀಸ್‌ಗೆ ನೆರವಾಗಲಿದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಫಿನ್ ಆಲೆನ್, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಂಪ್ಮನ್ ಹಾಗೂ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ತಮ್ಮ ಅನುಭವವನ್ನು ಪ್ರದರ್ಶಿಸಲಿದ್ದಾರೆ. ಬಿಗ್‌ಬ್ಯಾಷ್ ಲೀಗ್ ಮುಗಿದ ಬಳಿಕ ಟಿಮ್ ಸೀಫರ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
