ಉದಯವಾಹಿನಿ, ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ಸ್ಟುವರ್ಟ್‌ ಬ್ರಾಡ್‌ ಕೂಡ ಒಬ್ಬರು. ಇವರು 2023ರಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದ ಹಾಗೆ ಸ್ಟುವರ್ಟ್‌ ಬ್ರಾಡ್‌ ಅವರು 2007ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ಯುವರಾಜ್‌ ಸಿಂಗ್‌ ಆರು ಸಿಕ್ಸರ್‌ ಹೊಡೆಸಿಕೊಂಡಿದ್ದರು. ಈ ಘಟನೆಯನ್ನು ಬ್ರಾಡ್‌ ಇದೀಗ ಸ್ಮರಿಸಿಕೊಂಡಿದ್ದಾರೆ. ಈ ಘಟನೆಯಿಂದ ನನ್ನ ವೃತ್ತಿ ಜೀವನದ 5 ವರ್ಷಗಳು ಉಳಿದಿವೆ ಎಂದು ಹೇಳಿದ್ದಾರೆ.

2007ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದಿತ್ತು. ಈ ವೇಳೆ ಡರ್ಬನ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ಪಂದ್ಯ ನಡೆದಿತ್ತು. ಯುವರಾಜ್‌ ಸಿಂಗ್‌, ಸ್ಟುವರ್ಟ್‌ ಬ್ರಾಡ್‌ ಅವರ ಏಕೈಕ ಓವರ್‌ನ ಎಲ್ಲಾ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಬಾರಿಸಿದ್ದರು. ಆ ಮೂಲಕ ಬ್ರಾಡ್‌ ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ಭಾರಿ ಹಿನ್ನಡೆ ಅನುಭವಿಸಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಕ್ರಿಕೆಟ್‌ ವೃತ್ತಿ ಜೀವನವನ್ನು ಮುಗಿಸಿದ ಬಳಿಕ ಬ್ರಾಡ್‌ ಇದೀಗ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರು ಅಂದಿನ ಘಟನೆಯನ್ನು ನೆನೆದುಕೊಂಡಿದ್ದಾರೆ. ಆ ದಿನ ಮುಂದೆ ನನ್ನನ್ನು ಉತ್ತಮ ಆಟಗಾರನನ್ನಾಗಿ ಮಾಡಿತು ಎಂದು ಹೇಳಿಕೊಂಡಿದ್ದಾರೆ. ಅಂದು ಸಿಕ್ಸರ್‌ ಹೊಡೆಸಿಕೊಂಡಿದ್ದರ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

“ಅದು ಎಂದಿಗೂ ಸಂಭವಿಸದಿರಲಿ ಎಂದು ನಾನು ಬಯಸುತ್ತೇನೆ, ಆದರೆ ವಿಚಿತ್ರವೆಂದರೆ, ಅದು ಒಂದು ಅರ್ಥದಲ್ಲಿ ನನ್ನಿಂದಲೇ ಸೃಷ್ಟಿಯಾಗಿತ್ತು. ಕ್ರೀಡೆಯಿಂದ ಬಂದ ಆ ಭಯಾನಕ ಮಾತು ನಿಮಗೆ ತಿಳಿದಿದೆ, ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳಿ, ಆ ಮಾತನ್ನು ನಾನು ದ್ವೇಷಿಸುತ್ತೇನೆ. ಆದರೆ ಆ ಕ್ಷಣದಲ್ಲಿ, ಸಕಾರಾತ್ಮಕ ಅಂಶಗಳು ಏನೆಂದರೆ, ನಾವು ಆಗಲೇ ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದೆವು. ಮರುದಿನ ಬೆಳಿಗ್ಗೆ ಹೊರಡಲು ನಮ್ಮ ವಿಮಾನಗಳನ್ನು ಈಗಾಗಲೇ ಬುಕ್ ಮಾಡಲಾಗಿತ್ತು. ಆ ಸಮಯದಲ್ಲಿ ನನಗೆ 19 ಅಥವಾ 20 ವರ್ಷ ವಯಸ್ಸಾಗಿತ್ತು, ದಕ್ಷಿಣ ಆಫ್ರಿಕಾ ನಮಗಿಂತ ಮೊದಲು ಆಡಿತ್ತು, ಅದೇ ಮೈದಾನದಲ್ಲಿ ಅದು ಡಬಲ್ ಹೆಡರ್ ಆಗಿತ್ತು. ನಾನು ಹಿಂತಿರುಗಿ ನೋಡಿದಾಗ, ನನ್ನಲ್ಲಿ ಯಾವುದೇ ತಯಾರಿ ಇರಲಿಲ್ಲ,” ಎಂದು ಸ್ಟುವರ್ಟ್‌ ಬ್ರಾಡ್, ಮ್ಯಾಥ್ಯೂ ಹೇಡನ್ ಅವರ ಆಲ್ ಓವರ್ ಬಾರ್ ದಿ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನೊಂದಿಗಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!