ಉದಯವಾಹಿನಿ, ಹಾಸನ: ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನಲೆ ಹಾಸನ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಕೋರ್ಟ್‌ನ ಆದೇಶದಂತೆ ವಕೀಲರ ಜೊತೆ ಆಗಮಿಸಿದ ರೈತ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿಯವರ ಕಾರನ್ನು ಜಪ್ತಿ ಮಾಡಿದ್ದಾರೆ. ಯಗಚಿ ನಾಲೆಗಾಗಿ 15 ವರ್ಷಗಳ ಹಿಂದೆ ಆಲೂರು ತಾಲೂಕಿನ, ಭಕ್ತರವಳ್ಳಿ ಗ್ರಾಮದ ರೈತ ಮರಿಗೌಡ ಎಂಬವರಿಗೆ ಸೇರಿದ್ದ ಸರ್ವೆ ನಂ 44/1 ರಲ್ಲಿ ಹತ್ತುವರೆ ಗುಂಟೆ ಜಮೀನನ್ನು ನೀರಾವರಿ ಇಲಾಖೆ ಸ್ವಾಧಿನಪಡಿಸಿಕೊಂಡಿತ್ತು. ಇದಕ್ಕೆ 11,22,559 ರೂ. ಪರಿಹಾರ ನೀಡಬೇಕಿತ್ತು. ಹದಿನೈದು ವರ್ಷ ಕಳೆದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ರೈತ ಮರಿಗೌಡ ಹಾಗೂ ಅವರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದರು.
ಕೋರ್ಟ್‌ನಿಂದ ಕಾರು ಜಪ್ತಿ ಮಾಡುವಂತೆ ಆದೇಶ ಬಂದ ಹಿನ್ನಲೆ, ಮಧ್ಯಾಹ್ನ ವಕೀಲ ಮಂಜುನಾಥ್ ಜೊತೆ ಆಗಮಿಸಿ ಡಿಸಿ ಕಾರು ಜಪ್ತಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಅವರ ಪರವಾಗಿ ಎಡಿಸಿ ಜಗದೀಶ್.ಬಿ.ಎ. ಆಗಮಿಸಿ ಸಂಜೆಯೊಳಗೆ ಪರಿಹಾರ ನೀಡಲಾಗುವುದು ಸಮಯ ಕೊಡಿ ಎಂದು ಎಂದು ಮನವಿ ಮಾಡಿದರು.
