ಉದಯವಾಹಿನಿ, ಚಿಂದ್ವಾರ (ಮಧ್ಯಪ್ರದೇಶ): ಮನುಷ್ಯರಲ್ಲಿ ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರನ್ನೂ ಈ ಖಾಯಿಲೆ ಬಾಧಿಸುತ್ತಿದೆ. ವಿಚಿತ್ರ ಎಂದರೆ ಹೃದಯಾಘಾತವು ಇತ್ತೀಚೆಗೆ ಕಾಡುಪ್ರಾಣಿಗಳಲ್ಲೂ ಹೆಚ್ಚಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಹೃದಯಾಘಾತದಿಂದ ಚಿರತೆ ಸಾವು: ಇತ್ತೀಚೆಗೆ ಮಧ್ಯಪ್ರದೇಶದ ಚಿಂದ್ವಾರ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಯೊಂದು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಚಿರತೆಯ ಮೃತದೇಹ ಪತ್ತೆ ಹಚ್ಚಿದ್ದರು. ಈ ಕುರಿತು ತನಿಖೆ ಕೈಗೊಂಡಾಗ ಹೃದಯಾಘಾತದಿಂದ ಚಿರತೆ ಮೃತಪಟ್ಟಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

“ಚಿಂದ್ವಾರ ಅರಣ್ಯ ಇಲಾಖೆಯ ಭೂದ್ಕುಮ್ ಬೀಟ್‌ನಲ್ಲಿ ಚಿರತೆಯ ಮೃತದೇಹ ಸಿಕ್ಕಿತ್ತು. ಬಳಿಕ ಪಶುವೈದ್ಯರು ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಚಿರತೆಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಅಥವಾ ಬೇಟೆಯ ಚಿಹ್ನೆಗಳು ಕಂಡು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವೇಳೆ ಕಂಡು ಬಂದ ಪ್ರಾಥಮಿಕ ಲಕ್ಷಣಗಳನ್ನು ಆಧರಿಸಿ, ಚಿರತೆ ಹೃದಯಾಘಾತ ಅಥವಾ ಕ್ಷಯರೋಗದಂತಹ ಗಂಭೀರ ಕಾಯಿಲೆಯಿಂದ ಸಾವನ್ನಪ್ಪಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ ಅಂತಿಮ ವರದಿ ಇನ್ನೂ ಬಂದಿಲ್ಲ” ಎಂದು ಅರಣ್ಯ ಇಲಾಖೆಯ ಎಸ್‌ಡಿಒ ಅನಾದಿ ಬುಧೌಲಿಯಾ ತಿಳಿಸಿದ್ದಾರೆ. “ಮೃತ ಗಂಡು ಚಿರತೆಗೆ ಸುಮಾರು 8 ವರ್ಷ ವಯಸ್ಸಾಗಿತ್ತು. ಇದೇ ಪ್ರದೇಶದಲ್ಲಿ ಈ ಚಿರತೆ ಬಹಳ ವರ್ಷದಿಂದ ಓಡಾಡುತ್ತಿತ್ತು. ಏಕಾಏಕಿ ಮೃತಪಟ್ಟಿದ್ದು ಅರಣ್ಯ ಇಲಾಖೆಗೂ ಕಳವಳ ಉಂಟು ಮಾಡಿದೆ. ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಮಾದರಿಯನ್ನು ತನಿಖೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ” ಎಂದು ಅರಣ್ಯ ಅಧಿಕಾರಿ ಅನಾದಿ ಬುಧೌಲಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!