ಉದಯವಾಹಿನಿ, ಹೈದರಾಬಾದ್: ಬೈಕ್ ರೇಸಿಂಗ್ ಮತ್ತು ಕಾರ್ ರೇಸಿಂಗ್ ಎಲ್ಲರಿಗೂ ಪರಿಚಿತ. ಆದರೆ ಬಿಎಂಎಕ್ಸ್​ ಸೈಕಲ್ ರೇಸಿಂಗ್ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇದು ರೋಮಾಂಚಕ ಕ್ರೀಡೆಯಾಗಿದ್ದು, ಸವಾರರು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಸೈಕಲ್‌ಗಳನ್ನು ಓಡಿಸುತ್ತಾರೆ. ಒರಟಾದ ಮಣ್ಣಿನ ಟ್ರ್ಯಾಕ್‌ಗಳಲ್ಲಿ ಜಿಗಿತ, ಕಡಿದಾದ ತಿರುವುಗಳಲ್ಲಿ ಸಾಹಸ ಮೆರೆಯುತ್ತಾರೆ. ಬಿಎಂಕ್ಸ್​ ರೇಸಿಂಗ್ ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ್ದರೂ, ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಆದರೆ, ಹೈದರಾಬಾದ್‌ನ ಯುವಕನೊಬ್ಬ ಜಾಗತಿಕ ವೇದಿಕೆಯಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾನೆ.

ಬಿಎಂಎಕ್ಸ್​ ರೇಸಿಂಗ್ ಎಂದರೇನು?: BMX ರೇಸಿಂಗ್ ಸಾಮಾನ್ಯ ಸೈಕ್ಲಿಂಗ್ ಅಲ್ಲ. ಇದು ಉಬ್ಬುಗಳು, ಜಿಗಿತಗಳು ಮತ್ತು ವಕ್ರಾಕೃತಿಗಳಿಂದ ತುಂಬಿದ ವಿಶೇಷ ಮಣ್ಣಿನ ಟ್ರ್ಯಾಕ್‌ಗಳಲ್ಲಿ ವೇಗದಲ್ಲಿ ಸೈಕಲ್​ ಚಲಾಯಿಸುವ ಸ್ಪರ್ಧೆಯಾಗಿದೆ. ಸವಾರರು ವೇಗ ಮತ್ತು ನಿಯಂತ್ರಣಕ್ಕಾಗಿ ವಿನ್ಯಾಸಗೊಳಿಸಲಾದ ಸಣ್ಣ ಚಕ್ರಗಳ ಬೈಸಿಕಲ್‌ಗಳನ್ನು ಬಳಸುತ್ತಾರೆ. ಏಳು ರೇಸರ್‌ಗಳು ಆರಂಭಿಕ ಗೇಟ್‌ನಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಗೇಟ್ ಬಿದ್ದ ಕ್ಷಣ, ಅವರು ಸೈಕಲ್​ ಅನ್ನು ಚಲಾಯಿಸಿಕೊಂಡು ಗುರಿ ಮುಟ್ಟಬೇಕು. ಇಡೀ ಓಟವು ಕೇವಲ 30 ರಿಂದ 45 ಸೆಕೆಂಡುಗಳವರೆಗೆ ಇರುತ್ತದೆ. ಈ ಕೆಲವು ಸೆಕೆಂಡುಗಳಲ್ಲಿ, ಸವಾರರು ವೇಗದ ಜೊತೆಗೆ ಸಾಹಸಗಳನ್ನು ಪ್ರದರ್ಶಿಸುತ್ತಾ ತಿರುವುಗಳ ಮೇಲೆ ನಿಯಂತ್ರಣ ಸಾಧಿಸಿ ಕೌಶಲ್ಯವನ್ನು ಮೆರೆಯಬೇಕು.

ಹೈದರಾಬಾದ್​ ಯುವಕನ ಸಾಧನೆ: ಹೈದರಾಬಾದ್​ ನಿವಾಸಿಯಾದ ಅಗಸ್ತ್ಯ ಚಂದ್ರಶೇಖರ್ ಎಂಬವರು BMX ರೇಸರ್‌ ಆಗಿದ್ದಾರೆ. ಮೂಲತಃ ತಮಿಳುನಾಡಿನ ಚೆನ್ನೈನವರಾಗಿದ್ದರೂ, ಅವರ ಕುಟುಂಬ ಕಳೆದ 20 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದೆ. ಪ್ರಸ್ತುತ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಅಗಸ್ತ್ಯ ಏಳನೇ ವಯಸ್ಸಿನಲ್ಲಿ ಬಿಎಂಎಕ್ಸ್​ ರೇಸಿಂಗ್ ಪ್ರಾರಂಭಿಸಿದರು. 17ನೇ ವಯಸ್ಸಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಯುವ ಬಿಎಂಎಕ್ಸ್​ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿದೇಶದಲ್ಲಿ ತರಬೇತಿ: ದೇಶದಲ್ಲಿ ಸರಿಯಾದ ಬಿಎಂಎಕ್ಸ್​ ರೇಸಿಂಗ್ ಟ್ರ್ಯಾಕ್‌ಗಳಿಲ್ಲ. ಈ ಕೊರತೆ ಅಗಸ್ತ್ಯರ ಸಾಧನೆಗೆ ಅಡ್ಡಿಯಾಗಲಿಲ್ಲ. ಮಲೇಷ್ಯಾ ಮತ್ತು ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ ನಾಲ್ಕು ತಿಂಗಳು ಅಮೆರಿಕದಲ್ಲಿ ಕಳೆಯುತ್ತಾರೆ. ವೃತ್ತಿಪರ ತರಬೇತುದಾರರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾರೆ. ಇಲ್ಲಿಯವರೆಗೆ, ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ 30ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

2023 ರಲ್ಲಿ ಅಗಸ್ತ್ಯ ಅವರು ಮಲೇಷ್ಯಾದಲ್ಲಿ ನಡೆದ ಏಷ್ಯನ್ ಈವೆಂಟ್‌ಗಳಲ್ಲಿ ಚಿನ್ನದ ಪದಕ ಗೆದ್ದರು. ಈ ಸಾಧನೆ ಮಾಡಿದ ಭಾರತದ ಏಕೈಕ ಯುವ ಬಿಎಂಎಕ್ಸ್​ ರೇಸರ್ ಆಗಿದ್ದಾರೆ. ಇಂಡೋನೇಷ್ಯಾ, ಅಮೆರಿಕ, ಥಾಯ್ಲೆಂಡ್​, ಮಲೇಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!