ಉದಯವಾಹಿನಿ, ಲಖೀಂಪುರ್ ಖೇರಿ (ಉತ್ತರ ಪ್ರದೇಶ): ದುಧ್ವಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಫಾರಿ ಮಾಡಿದ್ದ ಪ್ರವಾಸಿಗರಿಗೆ ರೋಮಾಂಚಕಾರಿ ದೃಶ್ಯವೊಂದು ಕಂಡು ಬಂದಿದೆ. ಕಾಡಿನಿಂದ ಹೊರಬಂದ ಹುಲಿಯೊಂದು ದೈತ್ಯ ಹೆಬ್ಬಾವನ್ನು ಭೇಟಿಯಾಡಿದೆ. ಹುಲಿಯ ಬಾಯಲ್ಲಿ ಸಿಲುಕಿದ ಜೀವಂತ ಹೆಬ್ಬಾವು ಪ್ರಾಣ ರಕ್ಷಣೆಗೆ ಹೋರಾಟ ಮಾಡುತ್ತಿರುವುದು ಕಂಡು ಬಂದಿತು. ದುಧ್ವಾ ಹುಲಿ ಸಂರಕ್ಷಿತ ಅರಣ್ಯ ಸಿಬ್ಬಂದಿ ಸೆರೆಹಿಡಿದ ಈ ದೃಶ್ಯದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
7 ಅಡಿ ಉದ್ದದ ಹೆಬ್ಬಾವು: ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಪ್ರಾಣಿ ಮತ್ತು ಅರಣ್ಯದ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಂದಾಗಿದ್ದರು. ಈ ವೇಳೆ ಅವರಿಗೆ ಹುಲಿಯೊಂದು ಕಣ್ಣಿಗೆ ಬಿದ್ದಿದೆ. ಈ ವೇಳೆ ಹುಲಿ ಬಾಯಲ್ಲಿ ಹೆಬ್ಬಾವು ಇರುವುದು ಕಂಡು ಬಂತು. ಅಷ್ಟೇ ಅಲ್ಲ ಸುಮಾರು 7 ಅಡಿ ಉದ್ದದ ಹೆಬ್ಬಾವು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಜಂಗಲ್ ಸಫಾರಿ ಚಾಲಕ ಮೋನಿಶ್ ಮತ್ತು ಮಾರ್ಗದರ್ಶಿ ರಾಜು ಅವರು ಕಳೆದ ಭಾನುವಾರ ಪ್ರವಾಸಿಗರನ್ನು ಕಾಡಿನ ಪ್ರವಾಸಕ್ಕೆ ಕರೆದೊಯ್ದಿದ್ದಾಗ ಈ ಅಪರೂಪದ ದೃಶ್ಯ ಕಂಡು ಬಂದಿದೆ.
ಸಫಾರಿ ಮಾರ್ಗ ಪೊದೆಯಿಂದ ಹೊರ ಬಂದ ಹಾವು ದೈತ್ಯ ಹೆಬ್ಬಾವನ್ನು ಹಲ್ಲುಗಳಲ್ಲಿ ಕಚ್ಚಿ ಬಿಗಿಯಾಗಿ ಹಿಡಿದು, ಅರಣ್ಯದೊಳಗೆ ಹೋಗುತ್ತಿರುವ ದೃಶ್ಯ ಕಂಡು ಬಂದಿದ್ದು, ಇದನ್ನು ನೋಡಿದ ಪ್ರವಾಸಿಗರು ಅವಾಕ್ಕಾದರು.
ಹುಲಿ ಕಂಡು ಗಾಬರಿಗೊಂಡ ಪ್ರವಾಸಿಗರು: ಸಫಾರಿ ವೇಳೆ ಹುಲಿಯನ್ನು ಕಾಣುವ ನಿರೀಕ್ಷೆಯಲ್ಲಿ ಹೋಗಿದ್ದವರಿಗೆ ಅನೇಕ ಬಾರಿ ನಿರಾಸೆಯಾಗುವುದುಂಟು. ಆದರೆ, ಭಾನುವಾರ ಸಫಾರಿಗೆ ಹೋದ ಪ್ರವಾಸಿಗರಿಗೆ ಮಾತ್ರ ಪ್ರಕೃತಿಯ ರಸದೌತಣ ಸಿಕ್ಕಿದೆ. ಚಾಲಕ ಹುಲಿ ಹೆಜ್ಜೆಯನ್ನು ಗಮನಿಸಿ, ಸುರಕ್ಷಿತ ದೂರದಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ, ಎರಡು ನಿಮಿಷ ಮೌನದಿಂದ ಕಾದಿದ್ದ ಪ್ರವಾಸಿಗರಿಗೆ ಇದ್ದಕ್ಕಿದ್ದಂತೆ ಹುಲಿಯ ದರ್ಶನವಾಗಿದೆ. ಹುಲಿಯ ಬಾಯಲ್ಲಿ ಹೆಬ್ಬಾವು ಇರುವುದನ್ನು ಕಂಡ ಪ್ರವಾಸಿಗರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ. ಕಾಡಿನ ಈ ಬೇಟೆ ದೃಶ್ಯ ಕಂಡ ಅವರು ಒಂದು ನಿಮಿಷ ರೋಮಂಚನಗೊಂಡು, ತಕ್ಷಣಕ್ಕೆ ತಮ್ಮ ಮೊಬೈಲ್ ಕ್ಯಾಮೆರಾಗಳ ಮೂಲಕ ಈ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾದರು.
ಹುಲಿ ಸಂರಕ್ಷಿತ ಧಾಮದ ಸಿಬ್ಬಂದಿಯಿಂದ ವಿಡಿಯೋ: ದುಧ್ವಾ ಹುಲಿ ಮೀಸಲು ಸಿಬ್ಬಂದಿ ಕೂಡ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಈ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. ದುಧ್ವಾ ಹುಲಿ ಮೀಸಲು ಪ್ರದೇಶದ ಉಪನಿರ್ದೇಶಕ ಜಗದೀಶ್ ಆರ್ ಮಾತನಾಡಿ, ಈ ದೃಶ್ಯವು ಅತ್ಯಂತ ಅಪರೂಪದ್ದಾಗಿದೆ. ಹುಲಿಗಳು ಸಾಮಾನ್ಯವಾಗಿ ಜಿಂಕೆ, ಕಡವೆ ಮತ್ತು ಕಾಡು ಹಂದಿಗಳಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ, ಆದರೆ ಹೆಬ್ಬಾವುಗಳಂತಹ ದೊಡ್ಡ ಸರೀಸೃಪಗಳನ್ನು ಬೇಟೆಯಾಡುವುದು ಅಪರೂಪ. ಪ್ರವಾಸಿಗರಿಗೆ ಈ ರೀತಿ ಬೇಟೆಯಾಡುವ ದೃಶ್ಯ ನೋಡಿರುವುದು ಮೊದಲು ಎಂದಿದ್ದಾರೆ.
