ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ತೀವ್ರಗೊಳ್ಳುತ್ತಿದ್ದು, ಫೆನಿ ಜಿಲ್ಲೆಯ ದಗನ್‌ಭುಯಾನ್ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಜಗತ್‌ಪುರ ಗ್ರಾಮದ ಹೊಲದಲ್ಲಿ ಸೋಮವಾರ 27 ವರ್ಷದ ಆಟೋರಿಕ್ಷಾ ಚಾಲಕ ಸಮೀರ್ ದಾಸ್ ಅವರ ಮೃತದೇಹ ಪತ್ತೆಯಾಗಿದೆ. ಕುಟುಂಬ ಸದಸ್ಯರು ಮತ್ತು ಪೊಲೀಸರನ್ನು ಉಲ್ಲೇಖಿಸಿ ಬಾಂಗ್ಲಾದೇಶದ ಬಂಗಾಳಿ ಪತ್ರಿಕೆ ಡೈಲಿ ಮನೋಬ್ಕಾಂತ ಈ ವರದಿ ಮಾಡಿದೆ. ಸಮೀರ್ ಭಾನುವಾರ ಸಂಜೆ ತನ್ನ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದಾನೆ. ತಡರಾತ್ರಿಯಾದರೂ ಹಿಂತಿರುಗದೇ ಇರುವುದರಿಂದ ಅವರ ಸಂಬಂಧಿಕರು ವಿವಿಧ ಸ್ಥಳಗಳಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದರು.
ಜಗತ್‌ಪುರ ಗ್ರಾಮದ ಹೊಲದಲ್ಲಿ ಸಮೀರ್ ಅವರ ಮೃತದೇಹ ಬಿದ್ದಿರುವುದನ್ನು ನಿವಾಸಿಗಳು ಕಂಡಿದ್ದಾರೆ. ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಮೃತದೇಹದಲ್ಲಿ ಹಲವಾರು ಇರಿತದ ಗಾಯಗಳಿದ್ದು, ಸಮೀರ್ ಅವರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಗಳ ಮೂಲಕ ಅಂದಾಜಿಸಲಾಗಿದೆ. ಘಟನೆಯನ್ನು ದೃಢಪಡಿಸಿದ ದಗನ್‌ಭುಯಾನ್ ಪೊಲೀಸ್ ಠಾಣಾಧಿಕಾರಿ (ಒಸಿ) ಮುಹಮ್ಮದ್ ಫೈಜುಲ್ ಅಜೀಂ ನೋಮನ್, ಶವವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಫೆನಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಅವರ ಆಟೋರಿಕ್ಷಾ ಪತ್ತೆಯಾಗಿಲ್ಲ. ಕೊಲೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಮತ್ತು ಬಂಧಿಸಲು ಮತ್ತು ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲು ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
