ಉದಯವಾಹಿನಿ, ದುಬೈ: ಇರಾನ್ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸೇನೆ ಕಠಿಣ ಕ್ರಮ ಕೈಗೊಂಡಿದೆ. ಈ ಪರಿಣಾಮ ಕನಿಷ್ಠ 538 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಅಥವಾ ರಕ್ಷಿಸಲು ಅಮೆರಿಕ ಹಾಗೂ ಇಸ್ರೇಲ್ ಮುಂದಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಇದೇ ವೇಳೆ, ಟೆಹ್ರಾನ್ ಎಚ್ಚರಿಕೆ ನೀಡಿದೆ.
ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ 10,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ. ಇರಾನ್‌ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಲಾಗಿದೆ. ಇದರಿಂದ ಫೋನ್ ಲೈನ್‌ಗಳು ಕಡಿತಗೊಂಡಿವೆ. ಹೀಗಾಗಿ ಈ ಬಗ್ಗೆ ನಿಖರ ಮಾಹಿತಿ ದೊರೆಯುವುದು ಅಸಾಧ್ಯವಾಗಿದೆ. ಇರಾನ್ ಸರ್ಕಾರವು ಒಟ್ಟಾರೆ ಸಾವು – ನೋವುಗಳ ಅಂಕಿ – ಅಂಶಗಳನ್ನು ನೀಡಿಲ್ಲ.
ವಿದೇಶಗಳಲ್ಲಿರುವವರಿಗೆ ಇರಾನ್ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿಲ್ಲ. ಈ ನಡುವೆ ಟೆಹ್ರಾನ್ ಹಾಗೂ ಇತರ ನಗರಗಳಿಗೆ ಭಾನುವಾರ ಪ್ರತಿಭಟನಾಕಾರರು ನುಗ್ಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ಇರಾನ್ ವಿರುದ್ಧ ಸೈಬರ್ ದಾಳಿಗಳು ಮತ್ತು ಅಮೆರಿಕ ಅಥವಾ ಇಸ್ರೇಲ್‌ನ ನೇರ ದಾಳಿಗಳು ಸೇರಿದಂತೆ ಹಲವಾರು ಸಂಭಾವ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತೀಕಾರದ ಬಗ್ಗೆ ಏನಾದರೂ ಯೋಚಿಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ – ಟ್ರಂಪ್: ಇರಾನ್ ಮೇಲೆ ಕ್ರಮದ ಬಗ್ಗೆ ಭಾನುವಾರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ಮಿಲಿಟರಿಯು ಅದನ್ನು ನೋಡಿಕೊಳ್ಳುತ್ತದೆ. ನಾವು ಕೆಲವು ಬಲವಾದ ಆಯ್ಕೆಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಇರಾನ್‌ನ ಪ್ರತೀಕಾರದ ಬೆದರಿಕೆಗಳ ಬಗ್ಗೆ ಕೇಳಿದಾಗ, ಅವರು ಹಾಗೆನಾದರೂ ಮಾಡಿದರೆ, ಅವರು ಹಿಂದೆಂದೂ ಕಾಣದಷ್ಟು ಪೆಟ್ಟು ತಿನ್ನಬೇಕಾಗುತ್ತದೆ ಹಾಗೂ ಆ ಮಟ್ಟದಲ್ಲಿ ದಾಳಿ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
