ಉದಯವಾಹಿನಿ, ವಾಷಿಂಗ್ಟನ್ ಡಿಸಿ: ದೇಶೀಯ ಭದ್ರತೆಯನ್ನು ಬಲಪಡಿಸಲು ಮತ್ತು ವಲಸೆ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ, ಸಾವಿರಾರು ವಿದ್ಯಾರ್ಥಿ ಮತ್ತು ವಿಶೇಷ ವೀಸಾಗಳು ಸೇರಿದಂತೆ 100,000ಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಿರುವುದಾಗಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಘೋಷಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಇಲಾಖೆ, ರದ್ದು ಮಾಡಿರುವ ವೀಸಾಗಳಲ್ಲಿ ಸುಮಾರು 8000 ವಿದ್ಯಾರ್ಥಿ ವೀಸಾಗಳು ಹಾಗೂ 2500 ಕ್ರಿಮಿನಲ್ ಚಟುವಟಿಕೆಗಳಿಗಾಗಿ US ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮುಖಾಮುಖಿಯಾದ ವ್ಯಕ್ತಿಗಳಿಗೆ ನೀಡಲಾದ ವಿಶೇಷ ವೀಸಾಗಳು ಎಂದು ತಿಳಿಸಿದೆ. “ಕ್ರಿಮಿನಲ್ ಚಟುವಟಿಕೆಗಳಿಗಾಗಿ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮುಖಾಮುಖಿಯಾದ ವ್ಯಕ್ತಿಗಳಿಗೆ ನೀಡಲಾದ 2,500 ವಿಶೇಷ ವೀಸಾಗಳು ಹಾಗೂ 8,000 ವಿದ್ಯಾರ್ಥಿ ವೀಸಾಗಳು ಸೇರಿದಂತೆ 100,000ಕ್ಕೂ ಹೆಚ್ಚು ವೀಸಾಗಳನ್ನು ವಿದೇಶಾಂಗ ಇಲಾಖೆ ಈಗ ರದ್ದುಗೊಳಿಸಿದೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ವೀಸಾ ರದ್ದತಿ ಮತ್ತು ಗಡೀಪಾರು ಮಾಡುವಿಕೆಯನ್ನು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಸಾಧನಗಳಾಗಿ ಬಳಸಲಾಗುತ್ತಿದೆ ಎಂದು ಮತ್ತಷ್ಟು ಪ್ರತಿಪಾದಿಸುತ್ತಿರುವ ವಿದೇಶಾಂಗ ಇಲಾಖೆಯು “ಅಮೆರಿಕವನ್ನು ಸುರಕ್ಷಿತವಾಗಿಡಲು ನಾವು ಈ ಗೂಂಡಾಗಳನ್ನು ಗಡೀಪಾರು ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ತನ್ನ ಪೋಸ್ಟ್‌ನಲ್ಲಿ ಸೇರಿಸಿದೆ. ಸದ್ಯದ ಈ ಬೆಳವಣಿಗೆ ಟ್ರಂಪ್ ಆಡಳಿತ, ತನ್ನ ವಲಸೆ ಕಾನೂನುಗಳ ಅನುಸರಣೆ ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳನ್ನು ಒತ್ತಿ ಹೇಳುತ್ತಿದೆ. ಜೊತೆಗೆ ವೀಸಾ ಹೊಂದಿರುವವರು ತಮ್ಮ ವಾಸ್ತವ್ಯದ ಸಮಯದಲ್ಲಿ ಎಲ್ಲ ಕಾನೂನು ಅವಶ್ಯಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವುದಕ್ಕೆ ಇನ್ನಷ್ಟು ಬಲ ನೀಡುವಂತಿದೆ. ಇತ್ತೀಚೆಗೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ವೀಸಾ ಹೊಂದಿರುವವರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸುವುದು ಗಂಭೀರ ಪರಿಣಾಮಗಳನ್ನು ಬೀರಬಹುದು. ಮತ್ತು ಇದರಿಂದ ವೀಸಾ ರದ್ದಾಗಬಹುದು ಮತ್ತು ಅಮೆರಿಕದಿಂದ ಗಡೀಪಾರು ಮಾಡಲು ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿತ್ತು.
