ಉದಯವಾಹಿನಿ, ಭವಿಷ್ಯದ ತಂತ್ರಜ್ಞಾನ ಮತ್ತು ಹಸಿರು ಶಕ್ತಿಗೆ ಅತ್ಯಗತ್ಯವಾಗಿರುವ ಮುಖ್ಯ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ ಅಮೆರಿಕದ ವಾಷಿಂಗ್ಟನ್‌ನಲ್ಲಿ ಅಂತಾರಾಷ್ಟ್ರೀಯ ಸಚಿವ ಮಟ್ಟದ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಭಾರತದ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೇ ಸಚಿವ ಡಾ. ಅಶ್ವಿನಿ ವೈಷ್ಣವ್ ಭಾಗವಹಿಸಿ, ಭಾರತ ವಹಿಸಬಹುದಾದ ಪಾತ್ರದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು. ಸಭೆಯನ್ನು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆಯೋಜಿಸಿದ್ದು ಹಲವು ದೇಶಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಸಚಿವ ವೈಷ್ಣವ್, ಜಾಗತಿಕವಾಗಿ ಮ್ಯಾನುಫ್ಯಾಕ್ಟರಿಂಗ್ ಕ್ಷೇತ್ರ ವೇಗವಾಗಿ ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ ಖನಿಜಗಳ ಪೂರೈಕೆ ಸರಪಳಿ ಬಲಿಷ್ಠವಾಗಿರುವುದು ಅತ್ಯಗತ್ಯ ಎಂದು ಹೇಳಿದರು. ಖನಿಜ ಸಂಸ್ಕರಣೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸರಪಳಿ ಭದ್ರತೆ ಕುರಿತಂತೆ ದೇಶಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿವೆ ಎಂದು ತಿಳಿಸಿದರು.
ಬ್ಯಾಟರಿ, ಸೌರಶಕ್ತಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಲಿಥಿಯಮ್, ಕೊಬಾಲ್ಟ್, ನಿಕಲ್, ಗ್ರಾಫೈಟ್ ಸೇರಿದಂತೆ ವಿರಳ ಭೂ ಖನಿಜಗಳ ಅವಶ್ಯಕತೆ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಿರುವುದರಿಂದ ಪರ್ಯಾಯ ವ್ಯವಸ್ಥೆ ನಿರ್ಮಿಸುವ ಪ್ರಯತ್ನಗಳು ಜೋರಾಗಿವೆ. ಭಾರತ ಈ ಪೂರೈಕೆ ಸರಪಳಿಯ ಭಾಗವಾದರೆ, ದೇಶೀಯ ಉತ್ಪಾದನೆಗೆ ಸ್ಥಿರ ಖನಿಜ ಲಭ್ಯತೆ, ಅಂತಾರಾಷ್ಟ್ರೀಯ ತಂತ್ರಜ್ಞಾನ ಸಹಕಾರ ಮತ್ತು ಉತ್ಪಾದನಾ ಕ್ಷೇತ್ರದ ಬಲವ ನೆಗೆ ದಾರಿ ತೆರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
