ಉದಯವಾಹಿನಿ, ಇತ್ತೀಚೆಗೆ ರಿಲೀಸ್ ಆಗಿರುವ ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಚಿತ್ರದ ಟೀಸರ್ ವಿರುದ್ಧ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ.
ಟೀಸರ್‌ನಲ್ಲಿ ಕಾಣಿಸಿರುವ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಆರೋಪಿಸಿ ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಅಯೋಗದ ಕಚೇರಿಗೆ ದೂರು ನೀಡಿದೆ. ಜೊತೆಗೆ ಆ ದೃಶ್ಯವನ್ನ ತೆಗೆದುಹಾಕುವಂತೆ ಮನವಿ ಮಾಡಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಚೇರಿಯಲ್ಲಿಲದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ನೀಡಲಾಗಿದೆ.
ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅಪಮಾನವಾಗುತ್ತಿರುವ ಕಾರಣ, ಟಾಕ್ಸಿಕ್ ಟೀಸರ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳನ್ನ ತೆಗೆದುಹಾಕುವ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸೆನ್ಸಾರ್ ಮಂಡಳಿ ಕೂಡ ಇದನ್ನ ಪರಿಶೀಲಿಸಬೇಕು ಎಂದು ಆಪ್ ಮಹಿಳಾ ಘಟಕದ ಸದಸ್ಯರು ಮನವಿ ಮಾಡಿದ್ದಾರೆ.
