ಉದಯವಾಹಿನಿ, ವಾಷಿಂಗ್ಟನ್ : ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಉರ್ಮಿ ಭಟ್ಟಾಚಾರ್ಯ ಪಾಲಕ್ ಪನೀರ್‌ನ ತಾರತಮ್ಯ ಘಟನೆಗೆ ಸಂಬಂಧಿಸಿದಂತೆ 1.8 ಕೋಟಿ ರುಪಾಯಿ ಪರಿಹಾರ ಗಳಿಸಿದ್ದಾರೆ.2023ರ ಸೆಪ್ಟೆಂಬರ್‌ನಲ್ಲಿ ವಿವಿಯ ಮೈಕ್ರೊವೇವ್‌ನಲ್ಲಿ ಮಧ್ಯಾಹ್ನದ ಊಟವನ್ನು ಬಿಸಿ ಮಾಡಬಾರದು ಎಂದು ಸಿಬ್ಬಂದಿಯೊಬ್ಬರು ಆದಿತ್ಯ ಪ್ರಕಾಶ್ ಅವರಿಗೆ ಹೇಳಿದ್ದರು. ಪನೀರ್ ವಾಸನೆ ಬರುತ್ತದೆ ಎಂದು ಇದಕ್ಕೆ ಕಾರಣ ನೀಡಿದ್ದರು. ಈ ಘಟನೆ ತಾರತಮ್ಯದ ಆರೋಪಕ್ಕೆ ಕಾರಣವಾಗಿದ್ದು, ಬಳಿಕ ನಾಗರಿಕ ಹಕ್ಕುಗಳ ಪ್ರಕರಣವಾಗಿ ಅಂತ್ಯ ಕಂಡಿದೆ.
ವರದಿ ಪ್ರಕಾರ, ಆದಿತ್ಯ ಪ್ರಕಾಶ್ ಅವರ ಮಧ್ಯಾಹ್ನದ ಊಟದ ತೀವ್ರ ವಾಸನೆ ಬಗ್ಗೆ ಸಿಬ್ಬಂದಿಯೊಬ್ಬರು ಆರೋಪಿಸಿದ ಬಳಿಕ ಈ ಘಟನೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆದಿತ್ಯ ಪ್ರಕಾಶ್, ಇದು ಕೇವಲ ಆಹಾರ. ನಾನು ಬಿಸಿ ಮಾಡಿ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಈ ಘಟನೆ ಗಂಭೀರ ಸ್ವರೂಪ ಪಡೆದುಕೊಂಡ ಬಳಿಕ, 34 ವರ್ಷದ ಆದಿತ್ಯ ಪ್ರಕಾಶ್ ಮತ್ತು 35 ವರ್ಷದ ಊರ್ಮಿ ಭಟ್ಟಾಚಾರ್ಯ ದಂಪತಿ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದರು. ದೂರಿನಲ್ಲಿ ತಾರತಮ್ಯದ ವರ್ತನೆ ಬಗ್ಗೆ ಆದಿತ್ಯ ಪ್ರಕಾಶ್ ಆತಂಕ ವ್ಯಕ್ತಪಡಿಸಿದ ನಂತರ, ಅದಕ್ಕೆ ಪ್ರತಿಕ್ರಿಯೆಯಾಗಿ ವಿಶ್ವವಿದ್ಯಾಲಯವು ಪ್ರತೀಕಾರಾತ್ಮಕ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
