ಉದಯವಾಹಿನಿ, ಔರಾದ್: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಮೊಹರಂ ನಿಮಿತ್ತ ಶಾಂತಿ ಸಭೆ ನಡೆಯಿತು. ಸಿಪಿಐ ಮಲ್ಲಿಕಾರ್ಜುನ ಇಕ್ಕಳಕ್ಕಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಅಹಿತಕರ ಘಟನೆಗಳು ನಡೆಯದಂತೆ ಹಬ್ಬ ಆಚರಿಸಬೇಕು. ಎಲ್ಲರೂ ಒಂದಾಗಿ ಹಬ್ಬ ಆಚರಿಸಬೇಕು ಎಂದರು. ಹಬ್ಬವನ್ನು ಸರ್ವಧರ್ಮೀಯರು ಸೌಹಾರ್ದತೆಯಿಂದ ಆಚರಿಸಬೇಕು. ಕೋಮು-ಗಲಭೆಗಳನ್ನು ಸಷ್ಟಿಸಿಕೊಂಡು ಹಬ್ಬ ಆಚರಿಸುವುದರಿಂದ ಧಾರ್ಮಿಕ ನಂಬಿಕೆಗಳು ದೂರವಾಗುತ್ತವೆ. ಹೀಗಾಗಿ ಗ್ರಾಮಸ್ಥರೆಲ್ಲರೂ ಸಹೋದರರಂತೆ ಮೊಹರಂ ಹಬ್ಬವನ್ನು ಆಚರಿಸಬೇಕು ಎಂದರು.ಪಿಎಸ್ ಐ ಮಡಿವಾಳಪ್ಪ ಬಾಗೋಡಿ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಮುಂಬರುವ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ನಡೆಸುವಂತೆ ವಿನಂತಿಸಿದರು. ಶಾಂತಿ
ಕಾಪಾಡಲು ಇಲಾಖೆಯೊಂದಿಗೆ ನಾಗರಿಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆಂದು ಹೇಳಿದರು. ಮುಖಂಡ ಶರಣಪ್ಪ ಪಾಟೀಲ್ ಮಾತನಾಡಿ, ಗ್ರಾಮಸ್ಥರು ಜಾತಿ, ಮತ, ಭೇದ ಎನ್ನದೇ ಒಗ್ಗಟ್ಟಾಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಕೇವಲ ಮುಸ್ಲಿಂ ಬಂಧುಗಳು ಹಬ್ಬ ಆಚರಿಸದೇ, ಹಿಂದೂಗಳು ಸಹ ಪಾಲ್ಗೊಳ್ಳಬೇಕು ಎಂದರು.
ಈ ವೇಳೆ ಮುಖಂಡರಾದ ಶಿವರಾಜ ಅಲಮಾಜೆ, ವಿರೇಶ ಅಲಮಾಜೆ, ರತ್ನಾದೀಪ ಕಸ್ತೂರೆ, ರಾಹುಲ್ ಜಾಧವ್, ಮೋಸಿನ ಬಾಗವಾನ, ರಹೀಮ ಸಾಹೇಬ್, ಖಾಜಾ ಮೈನೋದ್ದಿನ, ಮೊಹಮ್ಮದ್ ಸಾಬ್ ಸೇರಿದಂತೆ ಅನೇಕರಿದ್ದರು.
