ಉದಯವಾಹಿನಿ , ಕೊಲ್ಲಂ(ಕೇರಳ): ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ)ದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಗುರುವಾರ) ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಚಲಿಯಮ್ ಎಂಬಲ್ಲಿನ ಸಾಂಡ್ರಾ ಎ (18) ಮತ್ತು ತಿರುವನಂತಪುರಂ ಜಿಲ್ಲೆಯ ಮುಥಕ್ಕಲ್ ಎಂಬಲ್ಲಿನ ವೈಷ್ಣವಿ ವಿ (15) ಮೃತಪಟ್ಟ ಬಾಲಕಿಯರು ಎಂದು ಗುರುತಿಸಲಾಗಿದೆ.
ಸಾಂಡ್ರಾ 12ನೇ ತರಗತಿಯಲ್ಲಿ ಓದುತ್ತಿರುವ ಅಥ್ಲೀಟ್. ವೈಷ್ಣವಿ 10ನೇ ತರಗತಿಯಲ್ಲಿ ಓದುತ್ತಿದ್ದು, ಕಬಡ್ಡಿ ಆಟಗಾರ್ತಿ ಎಂದು ತಿಳಿದು ಬಂದಿದೆ. ಇಂದು ಬೆಳಗಿನ ಕ್ರೀಡಾ ತರಬೇತಿಯ ಅವಧಿಗೆ ಇಬ್ಬರೂ ಗೈರು ಹಾಜರಾಗಿದ್ದರು. 5 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.
ಬಾಲಕಿಯರಿದ್ದ ಕೊಠಡಿಯ ಬಾಗಿಲು ಬಡಿದು ತೆರೆಯುವಂತೆ ಕೂಗಿ ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಹಾಸ್ಟೆಲ್ ಸಿಬ್ಬಂದಿ ಬಾಗಿಲು ಒಡೆದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಬಾಲಕಿಯರು ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.ವೈಷ್ಣವಿ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಆದರೆ ಬುಧವಾರ ರಾತ್ರಿ ಸಾಂಡ್ರಾ ಅವರ ಕೋಣೆಗೆ ಬಂದಿದ್ದರು. ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳು ರಾತ್ರಿ 12.30ಕ್ಕೆ ಮೊದಲು ಇಬ್ಬರನ್ನೂ ನೋಡಿದ್ದಾರೆ. ಹಾಸ್ಟೆಲ್‌ನ ಉಸ್ತುವಾರಿಗಳು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಠಡಿ ಸಂಖ್ಯೆ 21ರ ಬಾಗಿಲಿನ ಬಳಿಯ ಸೀಲಿಂಗ್ ಫ್ಯಾನ್‌ಗೆ ಬೆಡ್‌ಶೀಟ್ ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ವೈಷ್ಣವಿ ಪತ್ತೆಯಾದರೆ, ಅದೇ ಕೋಣೆಯ ಮತ್ತೊಂದು ಸೀಲಿಂಗ್ ಫ್ಯಾನ್‌ಗೆ ಬೆಡ್‌ಶೀಟ್ ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಂಡ್ರಾ ಪತ್ತೆಯಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊಲ್ಲಂ ಪೂರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ.”ಸದ್ಯಕ್ಕೆ ಘಟನೆಗೆ ಕಾರಣ ತಿಳಿದು ಬಂದಿಲ್ಲ. ನಾವು ತನಿಖೆ ಮಾಡುತ್ತಿದ್ದೇವೆ” ಎಂದು ಕೊಲ್ಲಂ ನಗರ ಪೊಲೀಸ್ ಆಯುಕ್ತ ಕಿರಣ್ ನಾರಾಯಣನ್ ತಿಳಿಸಿದರು.ಮೃತದೇಹದ ಮರಣೋತ್ತರ ಪರೀಕ್ಷೆಗಳು ನಡೆದಿವೆ. ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
