ಉದಯವಾಹಿನಿ ,ಮುಂಬೈ : ರಾಜ್ಯದ 29 ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಮತದಾನದ ವೇಳೆ ಜನರ ಕೈ ಬೆರಳಿಗೆ ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ. ಇದರ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೆ, ಸಿಎಂ ದೇವೇಂದ್ರ ಫಡ್ನವೀಸ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿ ಎಂದು ಹೇಳಿದರು.ಶಾಯಿ ಬದಲಿಗೆ ಮಾರ್ಕರ್ ನೀಡಿರುವ ಆಯೋಗ: ಚುನಾವಣಾ ಸಿಬ್ಬಂದಿಗೆ ಮತಯಂತ್ರಗಳ ಜೊತೆಗೆ ಮಾರ್ಕರ್ ಪೆನ್ನುಗಳನ್ನು ನೀಡಲಾಗಿದೆ. ಹೀಗಾಗಿ, ಅವರು ಎಲ್ಲ ಮತದಾರರ ಕೈ ಬೆರಳಿಗೆ ಮಾರ್ಕರ್ನಿಂದ ಗುರುತು ಹಾಕುತ್ತಿದ್ದಾರೆ. ಇದು ಅಳಿಸಲು ಸಾಧ್ಯವಿದ್ದು, ನಕಲಿ ಮತದಾನ ನಡೆಯಲಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಶಾಯಿ ಬದಲಿಗೆ ಮಾರ್ಕರ್ ಪೆನ್ ನೀಡಿದ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾಣಿ ಅವರು, ಹೌದು. ಆಯೋಗವು ಶಾಯಿ ಬದಲಿಗೆ ಮಾರ್ಕರ್ ಪೆನ್ಗಳ ಕಿಟ್ ನೀಡಿದೆ. ಈ ವರ್ಷ, ಶಾಯಿಯ ಬದಲಿಗೆ ಮಾರ್ಕರ್‌ಗಳನ್ನು ಬಳಸಲಾಗುತ್ತಿದೆ ಎಂದರು.
ಗುರುತು ಸುಲಭವಾಗಿ ಅಳಿಸಬಹುದು ಎಂಬುದನ್ನು ಒಪ್ಪಿಕೊಂಡ ಅವರು, 2012 ರಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾರ್ಕರ್ ಬಳಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಳಸುವ ಶಾಯಿಯನ್ನು ಕೇಂದ್ರ ಚುನಾವಣಾ ಆಯೋಗ ಒದಗಿಸುತ್ತದೆ. ಆದರೆ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಾರ್ಕರ್ ಕಿಟ್‌ಗಳನ್ನು ಒದಗಿಸಿದೆ ಎಂದು ತಿಳಿಸಿದರು.
ವಿಪಕ್ಷಗಳಿಂದ ಟೀಕೆ: ಮಾರ್ಕರ್ ಪೆನ್ಗಳ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಶಾಯಿ ಬದಲಿಗೆ ಮಾರ್ಕರ್ ಪೆನ್ನುಗಳನ್ನು ಗುರುತು ಹಾಕಲು ಬಳಸಲಾಗುತ್ತಿದೆ. ಇದು ನಕಲಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಮಾರ್ಕರ್ನಿಂದ ಬೆರಳಿಗೆ ಹಾಕಿದ ಗುರುತನ್ನು ಸಲೀಸಾಗಿ ಅಳಿಸಬಹುದು ಎಂದರು.
ಸಿಎಂ ಫಡ್ನವೀಸ್ ಪ್ರತಿಕ್ರಿಯೆ: ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, “ಚುನಾವಣಾ ಆಯೋಗವು ಎಲ್ಲವನ್ನೂ ನಿರ್ಧರಿಸುತ್ತದೆ. ಮಾರ್ಕರ್ ಪೆನ್ನುಗಳನ್ನು ಈ ಹಿಂದೆ ಹಲವು ಬಾರಿ ಬಳಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಇದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದು ಎಂದು ಹೇಳಿದರು.
