ಉದಯವಾಹಿನಿ , ಬೀದರ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಮತ್ತು ಶೂಟೌಟ್ ಪ್ರಕರಣದ ಆರೋಪಿಗಳು ಎಲ್ಲಿದ್ದಾರೆ? ಕಳೆದ ಒಂದು ವರ್ಷದಿಂದ ಈ ಪ್ರಶ್ನೆಯನ್ನು ಇಟ್ಟುಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ.
ಹೌದು. ಬೀದರ್‌ನ ಶಿವಾಜಿ ವೃತ್ತದ ಬಳಿ ಎಸ್‌ಬಿಐ ಬ್ಯಾಂಕ್ ಮುಂಭಾಗ ಕಳೆದ ವರ್ಷದ ಈ ದಿನ ದೊಡ್ಡ ದರೋಡೆ ನಡೆದು 83 ಲಕ್ಷ ರೂ. ನೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಹಣ ಉಳಿಸಿಲು ಮುಂದಾದ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಮೇಲೆ ದರೋಡೆಕೋರರು ಶೂಟೌಟ್ ಮಾಡಿದ್ದರು.
ಇಬ್ಬರು ಮುಸುಕುಧಾರಿಗಳು ಶೂಟ್ ಮಾಡಿದ್ದರಿಂದ ಸ್ಥಳದಲ್ಲೇ ಸಿಬ್ಬಂದಿ ವೆಂಕಟ್ ಗಿರಿ ಸಾವನ್ನಪ್ಪಿದ್ರೆ ಶಿವಕುಮಾರ್ ಗುನ್ನಳ್ಳಿ ಗಂಭೀರ ಗಾಯಗೊಂಡಿದ್ದರು. ಈ ದರೋಡೆಕೋರ ಪತ್ತೆಗಾಗಿ ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಒಟ್ಟು 8 ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಲಾಗಿತ್ತು.
ಉತ್ತರ ಭಾರತದ ಹಲವು ರಾಜ್ಯದಲ್ಲಿ ಶೋಧ ಮಾಡಿ ಕೊನೆಗೆ ಬಿಹಾರ ಮೂಲದ ಇಬ್ಬರು ದರೋಡೆಕೋರರು ಎಂದು ಪತ್ತೆ ಹಚ್ಚಿ ವಾಂಟೆಡ್ ಎಂದು ಬಿಹಾರದ ಹಾಗೂ ಛತ್ತಿಸ್‌ಘಡದ ಗಲ್ಲಿಗಲ್ಲಿಗಳಲ್ಲಿ ಬೀದರ್ ಪೊಲೀಸರು ಪೋಸ್ಟ್ ಅಂಟಿಸಿದ್ದರು. ದರೋಡೆಕೋರ ಸುಳಿವು ನೀಡಿದ್ರೆ ಇಲಾಖೆಯಿಂದ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಹೀಗಿದ್ದರೂ ಇಲ್ಲಿಯವರೆಗೆ ರಾಜ್ಯ ಪೊಲೀಸರು ದರೋಡೆಕೋರರನ್ನು ಬಂಧಿಸಲು ವಿಫಲರಾಗಿದ್ದಾರೆ.
