ಉದಯವಾಹಿನಿ , ಕರಾಚಿ: ಎಂಟು ತಿಂಗಳ ಹಿಂದೆ ಆಪರೇಷನ್ ಸಿಂಧೂರ್ ನಿಂದ ಭಾರೀ ಹೊಡೆತ ಅನುಭವಿಸಿದ್ದರೂ ಪಾಕಿಸ್ತಾನ ಮಾತ್ರ ಬುದ್ದಿ ಕಲಿತಿಲ್ಲ. ಮತ್ತೆ ಡ್ರೋನ್ ಹಾರಾಟ ನಡೆಸುವ ಮೂಲಕ ಪ್ರಚೋದನೆ ಆರಂಭಿಸಿದೆ. ಜನವರಿ 9ರಿಂದ ಜಮ್ಮು ಮತ್ತು ಕಾಶ್ಮೀರದ ಗಡಿಭಾಗಗಳಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಈ ಅಕ್ರಮ ಪ್ರವೇಶಗಳನ್ನು ತಕ್ಷಣ ನಿಲ್ಲಿಸುವಂತೆ ಭಾರತ ಪಾಕ್‌ಗೆ ಎಚ್ಚರಿಕೆ ನೀಡಿದೆ. ಆದರೂ ಗುರುವಾರ ರಾತ್ರಿ ಮತ್ತೆ ಪಾಪಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡಿವೆ.
ಪಾಕ್ ಈಗ ಕಳುಹಿಸುತ್ತಿರುವ ಡ್ರೋನ್‌ಗಳು ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಸಂಘರ್ಷದ ವೇಳೆ ಬಳಸಿದ್ದ ಆತ್ಮಹತ್ಯಾ ಡ್ರೋನ್‌ಗಳಲ್ಲ. ಆತ್ಮಹತ್ಯಾ ಡ್ರೋನ್‌ಗಳು ಗುರಿಯನ್ನು ಹುಡುಕಿ, ಅದರ ಮೇಲೆ ನೇರ ದಾಳಿ ನಡೆಸುವಂತೆ ವಿನ್ಯಾಸಗೊಳಿಸಲಾದ ಮಾನವರಹಿತ ವೈಮಾನಿಕ ವಾಹನಗಳಾಗಿವೆ.
ಇತ್ತೀಚೆಗೆ ಕಂಡುಬಂದ ಡ್ರೋನ್‌ಗಳು ಹೆಚ್ಚಿನದಾಗಿ ಸಣ್ಣ ಗಾತ್ರದ, ಗುಪ್ತಚರ ನಿಗಾವಹಿಸುವ ಉದ್ದೇಶದ ಡ್ರೋನ್‌ಗಳಾಗಿದ್ದು, ಈ ವಿಷಯವನ್ನು ಸೇನಾ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. ಪಾಕ್‌ನ ಈ ಡ್ರೋನ್ ಚಟುವಟಿಕೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಜನರಲ್ ದ್ವಿವೇದಿ ತಿಳಿಸಿದ್ದಾರೆ.
“ಜನವರಿ 15 (ಸೇನಾ ದಿನ) ಮತ್ತು ಜನವರಿ 26 (ಗಣರಾಜ್ಯೋತ್ಸವ) ಸಮಯದಲ್ಲಿ ಭಾರತ ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ಭಯ ಪಾಕ್‌ಗೆ ಇದೆ. ಈ ಸಮಯದಲ್ಲಿ ಕಡಿಮೆ ಎತ್ತರದಲ್ಲಿ, ಲೈಟ್‌ಗಳನ್ನು ಆನ್ ಮಾಡಿಕೊಂಡು ಹಾರುವ ಸಣ್ಣ ಡ್ರೋನ್‌ಗಳನ್ನು ನಾವು ಕಂಡಿದ್ದೇವೆ,” ಎಂದು ದ್ವಿವೇದಿ ಹೇಳಿದರು.
