ಉದಯವಾಹಿನಿ , ವಾಷಿಂಗ್ಟನ್, ಅಮೆರಿಕ: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯಂತೆ, ಎರಡನೇ ಹಂತದ ಕದನ ವಿರಾಮಕ್ಕೆ ಚಾಲನೆ ನೀಡಲಾಗಿದ್ದು, ಗಾಜಾ ಶಾಂತಿ ಮಂಡಳಿ ರಚನೆಯನ್ನು ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಶಾಂತಿ ಮಂಡಳಿಯನ್ನು ಘೋಷಣೆ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದು, ಶೀಘ್ರದಲ್ಲೇ ಮಂಡಳಿಯ ಸದಸ್ಯರ ಕುರಿತು ತಿಳಿಸಲಾಗುವುದು ಎಂದಿದ್ದಾರೆ.
ಇದು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಒಟ್ಟುಗೂಡಿಸುವ ಅತ್ಯಂತ ಪ್ರತಿಷ್ಠಿತ ಮಂಡಳಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುದ್ಧಾನಂತರದ ಗಾಜಾದ ದೈನಂದಿನ ಆಡಳಿತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ 15 ಸದಸ್ಯರ ಪ್ಯಾಲೆಸ್ತೇನಿಯನ್ ತಾಂತ್ರಿಕ ಸಮಿತಿಗೆ ವಹಿಸಲಾಗಿದೆ.
ಈ ಸಮಿತಿಯು ಶಾಂತಿ ಮಂಡಳಿಯ ಮೇಲ್ವಿಚಾರಣೆ ನಡೆಸಲಿದ್ದು ಟ್ರಂಪ್ ಇದರ ನೇತೃತ್ವ ವಹಿಸಲಿದ್ದಾರೆ. ಗಾಜಾವನ್ನು ಸುರಕ್ಷಿತಗೊಳಿಸಲು ಮತ್ತು ಪರಿಶೀಲಿಸಿದ ಪ್ಯಾಲೆಸ್ತೇನಿಯನ್ ಪೊಲೀಸ್ ಘಟಕಗಳಿಗೆ ತರಬೇತಿ ನೀಡಲು ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಯನ್ನು ನಿಯೋಜಿಸಲು ಯೋಜನೆಯಲ್ಲಿ ತಿಳಿಸಲಾಗಿದೆ. ಇದೀಗ ಚೆಂಡು ಮಧ್ಯಸ್ಥಗಾರರ ಅಂಗಳದಲ್ಲಿದೆ. ಅಮೆರಿಕ ಖಾತರಿದಾರ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಸಮಿತಿಯನ್ನು ಸಬಲೀಕರಣಗೊಳಿಸಲು ಒತ್ತಾಯಿಸುತ್ತದೆ ಎಂದು ಹಿರಿಯ ಹಮಾಸ್ ನಾಯಕ ಬಾಸ್ಸೆಮ್ ನಯೀಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕ ಬೆಂಬಲಿತ ಗಾಜಾದ ಶಾಂತಿ ಯೋಜನೆ ಮೊದಲ ಬಾರಿಗೆ ಅಕ್ಟೋಬರ್ 10ರಂದು ಜಾರಿಗೆ ಬಂದಿತು. ಹಮಾಸ್ಗಳ ಸೆರೆಯಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಪ್ಯಾಲೆಸ್ತೇನಿಯನ್ ಉಗ್ರಗಾಮಿ ಗುಂಪು ಮತ್ತು ಇಸ್ರೇಲ್ ನಡುವಿನ ಹೋರಾಟವನ್ನು ಕೊನೆಗೊಳಿಸುವ ಉದ್ದೇಶವನ್ನು ಈ ಕದನ ವಿರಾಮ ಒಪ್ಪಂದ ಹೊಂದಿತ್ತು. ಕದನ ವಿರಾಮದ ನಡುವೆ ಹಿಂಸಾಚಾರದ ಆರೋಪ: ಎರಡನೇ ಹಂತದ ಕದನ ವಿರಾಮ ಇದೀಗ ಜಾರಿಯಲ್ಲಿದೆ. ಕದನ ವಿರಾಮದಲ್ಲಿ ಸಹಾಯದ ಕೊರತೆ ಮತ್ತು ಹಿಂಸಾಚಾರದ ನಿರಂತರ ಆರೋಪಗಳು ಕೇಳಿ ಬಂದಿದ್ದು, ಇದು ಜಾರಿಗೆ ಬಂದ ಬಳಿಕವೂ ಇಸ್ರೇಲ್ 451 ಜನರನ್ನು ಕೊಂದಿದೆ ಎಂದು ಗಾಜಾ ಆರೋಪಿಸಿದೆ.
