ಉದಯವಾಹಿನಿ , ಲಂಡನ್ : ಗಾಝಾ ಪ್ರದೇಶದ ಮೇಲೆ ಇಸ್ರೇಲ್ ನ ಯುದ್ಧದಿಂದಾಗಿ ಅಲ್ಲಿನ ಜನನ ಪ್ರಮಾಣ 41% ಕುಸಿದಿದ್ದು, ಸಂಘರ್ಷದ ಪರಿಣಾಮವಾಗಿ ತಾಯಂದಿರ ಸಾವು, ಗರ್ಭಪಾತಗಳು ಮತ್ತು ಗರ್ಭಧಾರಣೆಯ ತೊಡಕುಗಳು ಗರಿಷ್ಠ ಮಟ್ಟ ತಲುಪಿವೆ ಎಂದು ಎರಡು ಅಧ್ಯಯನ ವರದಿಗಳು ತಿಳಿಸಿವೆ.
ಯುದ್ಧದಿಂದ ಹಾನಿಗೊಳಗಾದ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಗರ್ಭಿಣಿಯರು, ಶಿಶುಗಳು ಹಾಗೂ ಮಾತೃತ್ವ ಆರೈಕೆಗೆ ಸಂಬಂಧಿಸಿದ ಅಂಕಿಅಂಶಗಳು ನವಜಾತ ಶಿಶುಗಳ ಮರಣ ಹಾಗೂ ಅಕಾಲಿಕ ಜನನಗಳ ಹೆಚ್ಚಳವನ್ನು ಬಹಿರಂಗಪಡಿಸಿವೆ. ಅಪಾಯಕಾರಿ ಯುದ್ಧಕಾಲದ ಪರಿಸ್ಥಿತಿಗಳು ಹಾಗೂ ಗಾಝಾದ ಆರೋಗ್ಯ ವ್ಯವಸ್ಥೆಯನ್ನು ಇಸ್ರೇಲ್ ವ್ಯವಸ್ಥಿತವಾಗಿ ವಿನಾಶಗೊಳಿಸಿರುವುದೇ ಈ ಆತಂಕಕಾರಿ ಸ್ಥಿತಿಗೆ ಕಾರಣ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಚಿಕಾಗೋ ವಿಶ್ವವಿದ್ಯಾಲಯದ ಕಾನೂನು ವಿದ್ಯಾಲಯದ ಗ್ಲೋಬಲ್ ಹೂಮನ್ ರೈಟ್ಸ್ ಕ್ಲಿನಿಕ್ ಮತ್ತು ಇಸ್ರೇಲ್‌ನ ಫಿಜಿಶಿಯನ್ಸ್ ಫಾರ್ ಪ್ಯೂಮನ್ ರೈಟ್ಸ್ (ಪಿಎಚ್‌ಆರ್) ಈ ಎರಡು ಅಧ್ಯಯನ ವರದಿಗಳನ್ನು ಬಿಡುಗಡೆಗೊಳಿಸಿವೆ. ಫೆಲೆಸ್ತೀನೀಯರಲ್ಲಿ ಜನನವನ್ನು ತಡೆಯುವ ಇಸ್ರೇಲ್ ನ ಉದ್ದೇಶಪೂರ್ವಕ ಕ್ರಮಗಳು ಜನಾಂಗೀಯ ಹತ್ಯೆಯ ಮಾನದಂಡಕ್ಕೆ ಸಮಾನವಾಗಿವೆ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ.
2025ರ ಜನವರಿ ಮತ್ತು ಜೂನ್ ತಿಂಗಳ ಅವಧಿಯಲ್ಲಿ 2,600 ಗರ್ಭಪಾತಗಳು, 220 ಗರ್ಭಧಾರಣೆ ಸಂಬಂಧಿತ ಸಾವುಗಳು, 1,460 ಅವಧಿಪೂರ್ವ ಜನನಗಳು, ಸುಮಾರು 1,700 ಕಡಿಮೆ ತೂಕದ ನವಜಾತ ಶಿಶುಗಳು ಹಾಗೂ ತೀವ್ರ ನಿಗಾ ಅಗತ್ಯವಿರುವ 2,500ಕ್ಕೂ ಹೆಚ್ಚು ನವಜಾತ ಶಿಶುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!