ಉದಯವಾಹಿನಿ , ಢಾಕಾ: ಆಟಗಾರರು ದಂಗೆಗೆ ಮಣಿದ ಬಾಗ್ಲಾದೇಶ ಕ್ರಿಕೆಟ್ ಮಂಡಳಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಮ್ ಅವರನ್ನು ವಜಾಗೊಳಿಸಿದೆ.ಬಾಂಗ್ಲಾದ ಮಾಜಿ ನಾಯಕ ತಮೀಮ್ ಇಕ್ಬಾಲ್ ಮತ್ತು ಬಾಂಗ್ಲಾ ಆಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಜ್ಮುಲ್ ಅವರನ್ನು ಸ್ಥಾನದಿಂದ ಇಳಿಸಬೇಕೆಂದು ಆಟಗಾರರು ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೇ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ಆಡುತ್ತಿದ್ದ ಪ್ರಮುಖ ಆಟಗಾರರು ಪಂದ್ಯ ಬಹಿಷ್ಕರಿಸಿ ಪ್ರತಿಭಟಿಸಿದ ಬೆನ್ನಲ್ಲೇ ಅವರನ್ನು ಸ್ಥಾನದಿಂದ ತೆಗೆದು ಹಾಕಲಾಗಿದೆ. ನಜ್ಮುಲ್ ಇಸ್ಲಾಮ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದರೂ ಅವರು ಬಿಸಿಬಿ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
ಪಂದ್ಯ ರದ್ದು: ಬಾಂಗ್ಲಾದ ಹಿರಿಯ ಆಟಗಾರರು ಬಿಪಿಎಲ್ ಪಂದ್ಯಗಳನ್ನು ಬಹಿಷ್ಕರಿಸಿದ್ದರಿಂದ ಗುರುವಾರ ಟಾಸ್ ವಿಳಂಬವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಆರಂಭವಾಗಬೇಕಿದ್ದ ಚಟ್ಟೋಗ್ರಾಮ್ ರಾಯಲ್ಸ್ ಮತ್ತು ನೋವಾಖಾಲಿ ಎಕ್ಸ್‌ಪ್ರೆಸ್ ನಡುವಿನ ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದರು. ಪಂದ್ಯದ ಟಾಸ್‌ಗಾಗಿ ಮಧ್ಯಾಹ್ನ 12:30ರ ಸುಮಾರಿಗೆ ಮ್ಯಾಚ್ ರೆಫ್ರಿ ಮೈದಾನಕ್ಕೆ ಬಂದರೂ ಎರಡು ತಂಡಗಳ ನಾಯಕರು ಅಥವಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಕೊನೆಗೆ ರೆಫ್ರಿ ಪಂದ್ಯವನ್ನೇ ರದ್ದು ಮಾಡುವ ನಿರ್ಧಾರ ಕೈಗೊಂಡರು. ಪಂದ್ಯ ದಿಢೀರ್ ರದ್ದಾಗಿದ್ದಕ್ಕೆ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.
