ಉದಯವಾಹಿನಿ, ಕೀವ್ (ಉಕ್ರೇನ್): ರಷ್ಯಾ – ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಯೋಜನೆ ಕುರಿತು ಉಕ್ರೇನ್ ಅಮೆರಿಕದೊಂದಿಗೆ ಮುಂದಿನವಾರ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ತಿಳಿಸಿದ್ದಾರೆ. ವಿದೇಶಗಳಿಂದ ನಿಧಾನಗತಿಯ ಶಸ್ತ್ರಾಸ್ತ್ರ ವಿತರಣೆಯನ್ನು ಅವರು ಇದೇ ವೇಳೆ ಟೀಕಿಸಿದ್ದಾರೆ.ರಷ್ಯಾ ಜೊತೆಗಿನ ಯುದ್ಧಕ್ಕೆ ಅಂತ್ಯಹೇಳಲು ಉಕ್ರೇನ್ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಮತ್ತೊಂದು ಕಡೆ ಕೀವ್ ಮತ್ತು ವಾಷಿಂಗ್ಟನ್ ನಡುವೆ ಕೆಲವು ಭಿನ್ನಾಭಿಪ್ರಾಯಗಳಿವೆ. ಉಕ್ರೇನ್ ಶಾಂತಿ ಯೋಜನೆಯ ಭಾಗವಾಗಿ ಯಾವ ರೀತಿ ಭದ್ರತೆಯನ್ನು ಪಡೆಯಲಿದೆ. ರಷ್ಯಾ ಮತ್ತೆ ಆಕ್ರಮಣ ಮಾಡದಂತೆ ತಡೆಯಲು ಅಗತ್ಯ ಕ್ರಮದ ಕುರಿತು ಕೀವ್ ಸ್ಪಷ್ಟೀಕರಣ ಬಯಸಿದೆ. ಈ ಕುರಿತು ಹೆಚ್ಚಿನ ಮಾತುಕತೆಗಾಗಿ ಉಕ್ರೇನಿಯನ್ ಸಮಾಲೋಚಕರು ಅಮೆರಿಕಕ್ಕೆ ತೆರಳುತ್ತಿದ್ದಾರೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಅಮೆರಿಕದಿಂದ ಭದ್ರತಾ ಖಾತರಿಗಳು ಮತ್ತು ಯುದ್ಧದ ಬಳಿಕದ ಪುನರ್ನಿರ್ಮಾಣದ ಕುರಿತು ಮಾತುಕತೆ ನಡೆಸಬೇಕಿದೆ ಎಂದು ವಾಷಿಂಗ್ಟನ್ನಲ್ಲಿರುವ ಉಕ್ರೇನ್ ರಾಯಭಾರಿ ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಪಾಲುದಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ರಾಯಭಾರಿ ಓಲ್ಗಾ ಸ್ಟೆಫಾನಿಶಿನಾ ತಿಳಿಸಿದ್ದಾರೆ.
ಯುದ್ಧದ ನಿರ್ಣಾಯಕ ಕ್ಷಣದಲ್ಲಿ ಉಕ್ರೇನಿಯನ್ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ತು. ಉಕ್ರೇನ್‌ಗೆ ಸರಬರಾಜು ಮಾಡಲಾದ ಕೆಲವು ವಾಯು ರಕ್ಷಣಾ ವ್ಯವಸ್ಥೆಗಳು ಮದ್ದುಗುಂಡುಗಳ ಕೊರತೆ ಕಂಡು ಬಂದಿದೆ. ಇದು ದೇಶದ ಇಂಧನ ಮೂಲ ಸೌಕರ್ಯವನ್ನು ಧ್ವಂಸಗೊಳಿಸಿದೆ ಎಂದು ಝೆಲನ್ಸ್ಕಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ರಷ್ಯಾ ನೂರಾರು ಡ್ರೋನ್ ಮತ್ತು ಕ್ಷಿಪಣಿಗಳಿಂದ ಅತಿ ದೊಡ್ಡ ದಾಳಿ ನಡೆಸಿತ್ತು. ಹೀಗಾಗಿ ಉಕ್ರೇನ್ನಲ್ಲಿ ವಿದ್ಯುತ್ ಸ್ಥಾವರಗಳು ಮತ್ತು ಸಬ್‌ಸ್ಟೇಷನ್‌ಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದವು. ಇವುಗಳನ್ನು ಪುನಃಸ್ಥಾಪಿಸಲು 15,000 ಕ್ಕೂ ಹೆಚ್ಚು ಇಂಧನ ಕಾರ್ಮಿಕರು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರು ಮಾಹಿತಿ ಹಂಚಿಕೊಂಡರು. ನಾಲ್ಕು ವರ್ಷಗಳಿಂದ ಸಾಗಿರುವ ರಷ್ಯಾ ಉಕ್ರೇನ್ ಯುದ್ದದಲ್ಲಿ ಉಕ್ರೇನ್ನ ಪ್ರಮುಖ ನಗರಗಳು ನಾಶವಾಗಿವೆ. ಇನ್ನು ಪೂರ್ವ ಡೊನೆಟ್ಸ್ಕ್ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿ ಇನ್ನೂ ಎರಡು ಹಳ್ಳಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಸ್ಕೋ ತಿಳಿಸಿದೆ.
