ಉದಯವಾಹಿನಿ, ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರ ಹಾಗೂ ಯುಎಇ ವಿಶ್ವವಿದ್ಯಾಲಯದ ಕುಲಪತಿಗಳಾದ ಜಾಕಿ ಅನ್ವರ್ ನುಸೀಬೆಹ್ ಅವರು ಇತ್ತೀಚೆಗೆ ಅಬುಧಾಬಿಯ ಭವ್ಯ ಬಿಎಪಿಎಸ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಮನಸೋತಿದ್ದಾರೆ.
ದೇವಾಲಯದ ಮುಖ್ಯಸ್ಥರಾದ ಸ್ವಾಮಿ ಬ್ರಹ್ಮವಿಹಾರಿ ದಾಸ್ ಅವರನ್ನು ಭೇಟಿಯಾದ ನುಸ್ಸಿಬೆಹ್, ಈ ದೇವಾಲಯವು ಕೇವಲ ಪೂಜಾ ಸ್ಥಳವಾಗಿರದೆ, ಇಡೀ ವಿಶ್ವಕ್ಕೇ ಮಾದರಿಯಾದ ಶೈಕ್ಷಣಿಕ ಮತ್ತು ಮಾನವೀಯ ಕೇಂದ್ರವಾಗಿದೆ ಎಂದು ಬಣ್ಣಿಸಿದರು. ಈ ದೇವಾಲಯವನ್ನು “21ನೇ ಶತಮಾನದ ಜಾಗತಿಕ ಏಕತೆಯ ದಾರಿದೀಪ” ಎಂದು ಕರೆದ ಅವರು, ಇಂತಹ ಪವಾಣ ಸದೃಶ ಸ್ಥಳವನ್ನು ತಾವು ವಿಶ್ವದ ಬೇರಾವ ಮೂಲೆಯಲ್ಲೂ ನೋಡಿಲ್ಲವೆಂದು ಹರ್ಷ ವ್ಯಕ್ತಪಡಿಸಿದರು.
ಯುಎಇಯ ಸ್ಥಾಪಕ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರತಿಪಾದಿಸಿದ ಸಹಿಷ್ಣುತೆ ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮೌಲ್ಯಗಳಿಗೆ ಈ ದೇವಾಲಯವು ಕನ್ನಡಿ ಹಿಡಿದಿದೆ ಎಂದು ಅವರು ಅಭಿಪ್ರಾಯಪಟ್ಟರು. “ಇದು ಭವಿಷ್ಯದ ಪೀಳಿಗೆಗೆ ಜೀವನ ಮೌಲ್ಯಗಳನ್ನು ಕಲಿಸುವ ವಿಶ್ವದರ್ಜೆಯ ಮಾನವೀಯ ಶಾಲೆಯಾಗಿದೆ” ಎಂದು ಅವರು ಶ್ಲಾಘಿಸಿದರು. ಅಬುಧಾಬಿಯ ಅಲ್ ರಕ್ಷಾ ಪ್ರದೇಶದಲ್ಲಿ ತಲೆ ಎತ್ತಿರುವ ಈ ಭವ್ಯ ಮಂದಿರವು ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಿದೆ. ಯುಎಇ ಸರ್ಕಾರ ನೀಡಿದ ಭೂಮಿಯಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯು ಇದನ್ನು ನಿರ್ಮಿಸಿದೆ. 2019ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಂದಿರಕ್ಕೆ ಅಡಿಪಾಯ ಹಾಕಿದ್ದರು ಮತ್ತು ಫೆಬ್ರವರಿ 14, 2024ರಂದು ಇದು ಲೋಕಾರ್ಪಣೆಗೊಂಡಿತು.

Leave a Reply

Your email address will not be published. Required fields are marked *

error: Content is protected !!