ಉದಯವಾಹಿನಿ, ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಭಾರಿ ಸುಂಕ ವಿಧಿಸಿದ ಬೆನ್ನಲ್ಲೇ, ಭಾರತ ಸರ್ಕಾರವು ಅಮೆರಿಕಕ್ಕೆ ಸದ್ದಿಲ್ಲದೆ ತಿರುಗೇಟು ನೀಡಿದೆ. ಅಮೆರಿಕದಿಂದ ಆಮದಾಗುವ ದ್ವಿದಳ ಧಾನ್ಯಗಳ ಮೇಲೆ ಭಾರತವು ಶೇ. 30ರಷ್ಟು ಆಮದು ಸುಂಕವನ್ನು ವಿಧಿಸಿರುವುದು ಈಗ ತಡವಾಗಿ ಬೆಳಕಿಗೆ ಬಂದಿದ್ದು, ಇದು ಅಮೆರಿಕದ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗಷ್ಟೇ ಅಮೆರಿಕವು ಭಾರತದ ಕೆಲವು ಪ್ರಮುಖ ವಸ್ತುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಕಳೆದ ವರ್ಷದ ಅಕ್ಟೋಬರ್ 30 ರಂದೇ ಅಮೆರಿಕದ ಹಳದಿ ಬಟಾಣಿ ಸೇರಿದಂತೆ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸುವ ಆದೇಶ ಹೊರಡಿಸಿತ್ತು. ಇದು ನವೆಂಬರ್ 1 ರಿಂದ ಜಾರಿಗೆ ಬಂದಿದ್ದರೂ, ಪ್ರಚಾರವಿಲ್ಲದ ಕಾರಣ ಸುದ್ದಿಯಾಗಿರಲಿಲ್ಲ.
ಭಾರತದ ಈ ಕಠಿಣ ನಿರ್ಧಾರದಿಂದ ಅಮೆರಿಕದ ದ್ವಿದಳ ಧಾನ್ಯ ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರ ಡಕೋಟಾದ ಸೆನೆಟರ್ ಕೆವಿನ್ ಕ್ರೇಮರ್ ಮತ್ತು ಮಾಂಟಾನಾದ ಸ್ಟೀವ್ ಡೈನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ. ಭಾರತ ವಿಧಿಸಿರುವ ಈ ಸುಂಕ ಅನ್ಯಾಯ ಎಂದು ಕರೆದಿರುವ ಅವರು, ತಕ್ಷಣವೇ ಇದನ್ನು ತೆಗೆದುಹಾಕಲು ಭಾರತದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ವಿಶ್ವದ ಒಟ್ಟು ದ್ವಿದಳ ಧಾನ್ಯಗಳ ಬಳಕೆಯಲ್ಲಿ ಭಾರತದ ಪಾಲು ಶೇ. 27ರಷ್ಟಿದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಸುಂಕ ಏರಿಕೆಯಾದಾಗ ಅಮೆರಿಕದ ಉತ್ಪನ್ನಗಳು ದುಬಾರಿಯಾಗುತ್ತವೆ. ಕಡಲೆ, ಒಣ ಬೀನ್ಸ್ ಮತ್ತು ಬಟಾಣಿ ಉತ್ಪಾದಿಸುವ ಅಮೆರಿಕದ ರೈತರು ಭಾರತೀಯ ಮಾರುಕಟ್ಟೆಯಲ್ಲಿ ಇತರ ದೇಶಗಳ ಎದುರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಅಮೆರಿಕದ ಉತ್ತರ ಡಕೋಟಾ ಮತ್ತು ಮಾಂಟಾನಾ ರಾಜ್ಯಗಳಲ್ಲಿ ಬಟಾಣಿ ಉತ್ಪಾದನೆ ಹೆಚ್ಚಾಗಿದ್ದು, ಭಾರತದ ಈ ನಿರ್ಧಾರ ಅಲ್ಲಿನ ರೈತರ ಆರ್ಥಿಕತೆಯ ಮೇಲೆ ನೇರ ಹೊಡೆತ ನೀಡಿದೆ.
